ಬೆಂಗಳೂರು: ಮೂರು ವರ್ಷ ಪೂರ್ಣಗೊಂಡು 4ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದ ಹಿನ್ನೆಲೆಯಲ್ಲಿ ಹನುಮಂತನಗರದಲ್ಲಿ ಇರುವ ಅಪ್ಪಾಜಿ ಕ್ಯಾಂಟೀನ್ ನಲ್ಲಿ ಇಂದು ಒಂದು ರೂಪಾಯಿಗೆ ಊಟವನ್ನು ವಿತರಣೆ ಮಾಡಲಾಯಿತು.
ಈ ಸಂಬಂಧ ಮಾತನಾಡಿರುವ ಮಾಜಿ ಶಾಸಕ ಟಿ.ಎ ಶರವಣ, ಆಗಸ್ಟ್ 17 ರಂದು ನಮ್ಮ ದೇವೇಗೌಡ ಅಪ್ಪಾಜಿ ಕ್ಯಾಂಟೀನ್ ಲೋಕಾರ್ಪಣೆ ಮಾಡಲಾಯಿತು. ಅಂದಿನಿಂದ ಸತತವಾಗಿ ನಿಮ್ಮೆಲ್ಲರ ಪ್ರೀತಿ ಆಶೀರ್ವಾದದೊಂದಿಗೆ ನನ್ನ ಸ್ವಂತ ಶಕ್ತಿಯಿಂದ ಶುಚಿ ಮತ್ತು ರುಚಿಯಾದ ಆಹಾರವನ್ನು ಜನರಿಗೆ ನೀಡುತ್ತಾ ಬಂದಿದ್ದೇನೆ. ಪ್ರತಿದಿನ ಬೆಳಗ್ಗಿನ ಉಪಹಾರಕ್ಕೆ ಇಡ್ಲಿ, ವಡೆ, ಖಾರಾಬಾತ್, ಕೇಸರಿಬಾತ್ ಜೊತೆಗೆ ಮಧ್ಯಾಹ್ನದ ಊಟಕ್ಕೆ ರಾಗಿ ಮುದ್ದೆ, ಅನ್ನ ಸಾಂಬಾರ್, ರೈಸ್ ಬಾತ್ ನೀಡುತ್ತಾ ಬಂದಿದೆ. ದಿನನಿತ್ಯ ಸಾವಿರಾರು ಜನ ಇದರ ಸದುಪಯೋಗವನ್ನು ಪಡೆಯುತ್ತಾ ಬಂದಿದ್ದಾರೆ ಎಂದರು.
ಪ್ರಸ್ತುತ ಕೋವಿಡ್ 19 ಬೆಂಗಳೂರು ಆವರಿಸಿರುವ ಹಿನ್ನೆಲೆಯಲ್ಲಿ ಬಹಳಷ್ಟು ಜನರಿಗೆ ಪೌಷ್ಟಿಕಾಂಶವುಳ್ಳ ಊಟದ ವ್ಯವಸ್ಥೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ವಿಟಮಿನ್ ಎ,ಬಿ,ಚಿ ಹಾಗೂ ಕಬ್ಬಿಣಾಂಶ ಗುಣಗಳುಳ್ಳ ನವಣೆ, ತರಕಾರಿ ಹಾಗೂ ಸೊಪ್ಪಿನ ಅಂಶಗಳ ತಿಂಡಿ ಹಾಗೂ ಊಟವನ್ನು ಜನರಿಗೆ ನೀಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇಂದು ಒಂದು ದಿನ ಮಾತ್ರ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯವರೆಗೆ 1 ರೂಪಾಯಿಗೆ ಊಟವನ್ನು ನೀಡಲಾಗಿದೆ ಎಂದು ತಿಳಿಸಿದರು.
ಪ್ರತಿದಿನವೂ ಶುಚಿ ಮತ್ತು ರುಚಿಯಾದ ಕಷಾಯ, ತಿಂಡಿ ಹಾಗೂ ಊಟವನ್ನು ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ನೀಡುವಂತಹ ಕೆಲಸವನ್ನು ಪ್ರಾರಂಭಿಸಲಿದ್ದೇವೆ. ಇದರ ಸದುಪಯೋಗವನ್ನು ಬೆಂಗಳೂರಿನ ಮಹಾಜನರು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಂಡು ಪಡೆದುಕೊಳ್ಳಬೇಕು ಎಂದು ಇದೇ ವೇಳೆ ಶರವಣ ವಿನಂತಿಸಿಕೊಂಡರು.