ಬೆಂಗಳೂರು: ಕೊರೊನಾ ಹಿನ್ನೆಲೆ ಮಕ್ಕಳ ಜೀವ ತುಂಬಾ ಮುಖ್ಯ. ವಿದ್ಯೆಯನ್ನು ಯಾವಾಗ ಬೇಕಾದರೂ ಕಲಿಸಬಹುದು. ಜೀವ ಮುಖ್ಯವಾಗುತ್ತದೆ. ಹೀಗಾಗಿ ವಿದ್ಯಾಗಮ ರದ್ದು ಮಾಡುವ ಬಗ್ಗೆ ಹಾಗೂ ಶಾಲೆಯನ್ನು ಸದ್ಯ ಪ್ರಾರಂಭಿಸಬೇಡಿ ಎಂದು ಪತ್ರ ಬರೆದಿದ್ದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಕ್ಕಳ ಜೀವ ಮುಖ್ಯ, ವಿದ್ಯೆಯನ್ನು ಯಾವಾಗ ಬೇಕಾದರೂ ಕಲಿಸಬಹುದು. ಹೀಗಾಗಿ ನಾನು ಪತ್ರ ಬರೆದು ವಿದ್ಯಾಗಮ ನಿಲ್ಲಿಸುವ ಬಗ್ಗೆ ಹಾಗೂ ಶಾಲೆಯನ್ನು ಸದ್ಯ ಪ್ರಾರಂಭಿಸದಂತೆ ಪತ್ರ ಬರೆದಿದ್ದೆ. ಒಂದು ವರ್ಷ ಶಾಲೆಗೆ ಹೋಗದಿದ್ದರೆ ಏನೂ ಆಗಲ್ಲ. ಶಾಲೆಯನ್ನು ಪ್ರಾರಂಭಿಸುವ ಬಗ್ಗೆ ಆತುರ ಪಡಬಾರದು ಎಂದು ಸಲಹೆ ನೀಡಿದರು.
ಒಂದು ವರ್ಷ ಶಾಲೆಗೆ ಕಳುಹಿಸದಿದ್ದರೆ ಏನೂ ಆಗಲ್ಲ, ಪಾಸ್ ಮಾಡಿ. ನಾನೂ ನಾಲ್ಕನೇ ತರಗತಿ ವರೆಗೆ ಓದಲಿಲ್ಲ. ಒಮ್ಮೆಲೆ ನೇರವಾಗಿ 5ನೇ ತರಗತಿಗೆ ಸೇರಿಕೊಂಡೆ. ನಾನೇನು ದಡ್ಡನೇ, ಆದರೂ ರಾಜ್ಯದ ಮಂತ್ರಿಯಾಗಿ 13 ಬಜೆಟ್ ಮಂಡಿಸಿದ್ದೇನೆ ಎಂದು ವಿದ್ಯಾಗಮಕ್ಕೆ ವಿರೋಧ ವ್ಯಕ್ತಪಡಿಸಿದರು.
ಇಂದು ಉಪಚುನಾವಣೆ ನಡೆಯುತ್ತಿರುವ ಆರ್‍ಆರ್ ನಗರ ಹಾಗೂ ಶಿರಾ ಎರಡೂ ಕ್ಷೇತ್ರಗಳ ವೀಕ್ಷಕರೊಂದಿಗೆ ಸಭೆ ನಡೆಸಲಾಗಿದೆ. ನಾನು ಎರಡೂ ಕ್ಷೇತ್ರಗಳಿಗೆ ಪ್ರಚಾರಕ್ಕೆ ಹೋಗುತ್ತೇನೆ. ಅ.14ರಂದು ಶಿರಾದಲ್ಲಿ ಹಾಗೂ 15ರಂದು ಆರ್‍ಆರ್ ನಗರದಲ್ಲಿ ನಾಮಪತ್ರ ಸಲ್ಲಿಸುತ್ತೇವೆ. ಪ್ರತಿ ವಾರ್ಡ್ ನಿಂದ ಒಂದೊಂದು ಟೀಮ್ ಮಾಡಲಾಗಿದೆ, ಪ್ರತಿ ಬೂತ್ ಗೂ ಜವಾಬ್ದಾರಿ ನೀಡಲಾಗಿದೆ. ಆರ್.ಆರ್.ನಗರದಲ್ಲಿ 600ಕ್ಕೂ ಹೆಚ್ಚು ಬೂತ್‍ಗಳಿದ್ದು, ಎಲ್ಲ ಬೂತ್‍ಗಳಿಗೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ಟೀಮ್‍ನಲ್ಲಿ ಶಾಸಕರು, ಮಾಜಿ ಸಚಿವರು ಇರಲಿದ್ದಾರೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ಅಭ್ಯರ್ಥಿಗಳನ್ನು ಒಪ್ಪಲು ಇಷ್ಟ ಇಲ್ಲ. ಅವರ ಪಕ್ಷದಲ್ಲಿ ಸಂಘರ್ಷ ನಡೆಯುತ್ತಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದರು.
ಚುಣಾವಣೆ ಬಂದಾಗ ಎಚ್‍ಡಿಕೆಗೆ ಜಾತಿ ನೆನಪಾಗುತ್ತೆ
ಜಾತಿ ಅಸ್ತ್ರ ಪ್ರಯೋಗಿಸಲು ಮತದಾರರು ಕುಮಾರಸ್ವಾಮಿ ತಿಳಿದುಕೊಂಡಷ್ಟು ದಡ್ಡರಲ್ಲ. ಒಕ್ಕಲಿಗರು ಕುಮಾರಸ್ವಾಮಿ ಒಬ್ಬರನ್ನೇ ಹಿಂಬಾಲಿಸಲ್ಲ ಅಥವಾ ಇನ್ಯಾವುದೋ ನಾಯಕನನ್ನೂ ಫಾಲೋ ಮಾಡಲ್ಲ. ಯಾರೂ ಯಾವ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿಲ್ಲ. ಮತದಾರರಿಗೆ ಅವರದ್ದೇಯಾದ ತಿಳುವಳಿಕೆ ಇರುತ್ತದೆ. ಅದರ ಆಧಾರದ ಮೇಲೆ ಮತ ಹಾಕುತ್ತಾರೆ. ಚುನಾವಣೆ ಬಂದಾಗ ಕುಮಾರಸ್ವಾಮಿಯವರಿಗೆ ಜಾತಿ ನೆನಪಾಗುತ್ತದೆ. ಇದೆಲ್ಲ ಪರಿಣಾಮ ಬೀರಲ್ಲ. ಪರಿಣಾಮ ಬೀರೋದಾದರೆ ಕುಮಾರಸ್ವಾಮಿಯವರ ಮಗ ಯಾಕೆ ಮಂಡ್ಯದಲ್ಲಿ ಸೋಲುತ್ತಿದ್ದರು? ತುಮಕೂರಲ್ಲಿ ದೇವೇಗೌಡರು ಯಾಕೆ ಸೋಲುತ್ತಿದ್ದರು ಎಂದು ಪ್ರಶ್ನಿಸಿದರು.