ವಿಶಾಖಪಟ್ಟಣಂ: ಯಶಸ್ವಿ ಜೈಸ್ವಾಲ್ ಶತಕ ಹಾಗೂ ರೋಹಿತ್, ಕೊಹ್ಲಿ ಆಕರ್ಶಕ ಫಿಫ್ಟಿ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಆ ಮೂಲಕ ಸರಣಿ ಕೈವಶ ಮಾಡಿಕೊಂಡಿದೆ.
ರೋಹಿತ್ ಶರ್ಮಾ 75 ಹಾಗೂ ವಿರಾಟ್ ಕೊಹ್ಲಿ 65 ರನ್ ಗಳಿಸುವ ಮೂಲಕ ಭಾರತದ ಗೆಲುವಿಗೆ ನೆರವಾದರು. ಇದಕ್ಕೂ ಮೊದಲು ಪ್ರಸಿದ್ಧ್ ಕೃಷ್ಣ ಮತ್ತು ಕುಲದೀಪ್ ಯಾದವ್ ಉತ್ತಮ ಬೌಲಿಂಗ್ ಮೂಲಕ ಆಫ್ರಿಕಾ ತಂಡವನ್ನು 270 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಇಬ್ಬರೂ ತಲಾ ನಾಲ್ಕು ವಿಕೆಟ್ ಪಡೆದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 270 ರನ್‌ಗಳಿಗೆ ಆಲೌಟ್ ಆಯಿತು. 271 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ 9 ವಿಕೆಟ್‌ಗಳ ಜಯ ಸಾಧಿಸಿತು.
ಕ್ವಿಂಟನ್ ಡಿಕಾಕ್ ಶತಕದ (106 ರನ್) ಏಕಾಂಗಿ ಹೋರಾಟ ದಕ್ಷಿಣ ಆಫ್ರಿಕಾಗೆ ಕೈಗೂಡಲಿಲ್ಲ. ಉಳಿದ ಆಟಗಾರರಿಂದ ಕಳಪೆ ಬ್ಯಾಟಿಂಗ್ ಪ್ರದರ್ಶನ ಕಂಡುಬಂತು. ಕ್ಯಾಪ್ಟನ್ ಟೆಂಬಾ ಬವುಮಾ 48, ಡೆವಾಲ್ಡ್ ಬ್ರೆವಿಸ್ 29, ಮ್ಯಾಥ್ಯೂ ಬ್ರೀಟ್ಜ್ಕೆ 24, ಕೇಶವ ಮಹಾರಾಜ್ 20 ರನ್ ಗಳಿಸಿದರು. ಆಫ್ರಿಕಾ ಬ್ಯಾಟರ್‌ಗಳನ್ನು 270 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಪ್ರಸಿದ್ಧ್ ಮತ್ತು ಕುಲ್ದೀಪ್ ಯಶಸ್ವಿಯಾದರು.
ಟೀಂ ಇಂಡಿಯಾ ಪರ ಪ್ರಸಿದ್ಧ್ ಕೃಷ್ಣ, ಕುಲ್ದೀಪ್ ಯಾದವ್ ತಲಾ 4 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
271 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೈಸ್ವಾಲ್ ಭರ್ಜರಿ ಶತಕ (116) ಸಿಡಿಸಿದರು. ರೋಹಿತ್ ಶರ್ಮಾ (75) ಮತ್ತು ವಿರಾಟ್ ಕೊಹ್ಲಿ (65) ಫಿಫ್ಟಿ ಆಟ ತಂಡದ ಗೆಲುವಿಗೆ ನೆರವಾಯಿತು.

