ತಿರುವನಂತಪುರಂ: ಕೇರಳದ ಕೋಝಿಕೋಡ್ (Kozikode) ಜಿಲ್ಲೆಯಲ್ಲಿ 39 ವರ್ಷದ ವ್ಯಕ್ತಿಯಲ್ಲಿ ನಿಫಾ ಸೋಂಕು (Nipah Virus) ದೃಢವಾಗಿದೆ. ಈ ಮೂಲಕ ಕೇರಳದಲ್ಲಿ ನಿಫಾ ವೈರಸ್ ಪ್ರಕರಣ 6ಕ್ಕೆ ಏರಿಕೆಯಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ನಿಫಾ ವೈರಸ್ ಹಾಗೂ ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ನಿಫಾ ವೈರಸ್‍ಗೆ ಈ ವರ್ಷ ಕೇರಳದಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ 2018 ರಿಂದ ಇದುವರೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಯ ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದಿದ್ದು, ವ್ಯಕ್ತಿಗೆ ನಿಫಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ಅವರನ್ನು ಆಸ್ಪತ್ರೆಯಲ್ಲಿ ನಿಗಾವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ನಿಫಾ ವೈರಸ್ ಪ್ರಕರಣ ಕೇರಳದಲ್ಲಿ (Kerala) ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಐಸಿಎಂಆರ್, ಸೋಂಕಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಮೊನೊಕ್ಲೋನಲ್ ಆಂಟಿಬಾಡಿಯನ್ನು ಕೇರಳಕ್ಕೆ ಕಳುಹಿಸಿದೆ. ಆದರೂ ಅದರ ಪರಿಣಾಮಕಾರಿತ್ವವನ್ನು ಪ್ರಾಯೋಗಿಕವಾಗಿ ಇನ್ನೂ ಸಾಬೀತುಪಡಿಸಲಾಗಿಲ್ಲ.
ನಿಫಾ ವೈರಸ್ ಗೆ ಎರಡು ಸಾವುಗಳು ಸೇರಿದಂತೆ ಐದು ಪ್ರಕರಣಗಳು ವರದಿಯಾದ ನಂತರ ಪುಣೆಯಲ್ಲಿರುವ ಐಸಿಎಂಆರ್‍ನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ತನ್ನ ಮೊಬೈಲ್ ಬಿಎಸ್‍ಎಲ್ -3 (ಬಯೋಸೇಫ್ಟಿ ಲೆವೆಲ್ -3) ಪ್ರಯೋಗಾಲಯವನ್ನು ಕೋಝಿಕ್ಕೋಡ್‍ಗೆ ನಿಫಾ ವೈರಸ್‍ನ ಮಾದರಿಗಳನ್ನು ಪರೀಕ್ಷಿಸಲು ಕಳುಹಿಸಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಆರ್ ಎಂಎಲ್ ಆಸ್ಪತ್ರೆ ಮತ್ತು ನಿಮ್ಹಾನ್ಸ್‍ನ ತಜ್ಞರನ್ನೊಳಗೊಂಡ ಐದು ಸದಸ್ಯರ ಕೇಂದ್ರ ತಂಡವು ಕೇರಳದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ನಿಫಾ ಸೋಂಕಿನ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಬೀಡುಬಿಟ್ಟಿದೆ.
Web Stories