– ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ
ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ (Kallakurichi) ಜಿಲ್ಲೆಯಲ್ಲಿ ಕಳ್ಳಭಟ್ಟಿ ಪ್ಯಾಕೆಟ್ ಸಾರಾಯಿ (Toxic Liquor) ಕುಡಿದು ಮೃತಪಟ್ಟವರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. 65ಕ್ಕೂ ಹೆಚ್ಚು ಮಂದಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಗಂಭೀರವಾಗಿರುವ 18 ಮಂದಿಯನ್ನು ಪುದುಚೆರಿಯ ಜಿಪ್ಮರ್, 6 ಮಂದಿಯನ್ನು ಸೇಲಂನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳ್ಳಬಟ್ಟಿಯಲ್ಲಿ ವಿಷಕಾರಿ ಮೆಥನಾಲ್ ಇರುವಿಕೆಯು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ (FSL Test) ಖಚಿತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಡಿಎಂಕೆ ಸರ್ಕಾರ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?
ಮೃತಪಟ್ಟವರ ಕುಟುಂಬಸ್ಥರು ಮಾಧ್ಯಮಗಳೊಂದಿಗೆ ಅಳಲು ತೋಡಿಕೊಂಡಿದ್ದಾರೆ. ನನ್ನ ಮಗನಿಗೆ ತೀವ್ರ ಹೊಟ್ಟೆ ನೋವು ಕಂಡು ಬಂದಿತ್ತು. ಅವನಿಗೆ ಕಣ್ಣು ತೆರೆಯಲೂ ಆಗುತ್ತಿರಲಿಲ್ಲ, ಏನಾದರೂ ಹೇಳಿದರೆ ಕಿವಿಯೂ ಕೇಳಿಸುತ್ತಿರಲಿಲ್ಲ. ಆಸ್ಪತ್ರೆಗೆ ಹೋದರೆ ಮದ್ಯಪಾನ ಮಾಡಿದ್ದಾನೆಂದು ದಾಖಲಿಸಲೂ ನಿರಾಕರಿಸಿದರು. ರಾಜ್ಯ ಸರ್ಕಾರ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ
ಇದು ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಪರಿಣಾಮವಾಗಿ ಆಗಿರುವ ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ (AnnaMalai) ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಎಐಎಡಿಎಂಕೆ ಮುಖ್ಯಸ್ಥರಾಗಿರುವ ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷದ ನಾಯಕ ಪಳನಿಸ್ವಾಮಿ ಅವರು ಆಡಳಿತಾರೂಢ ಡಿಎಂಕೆ ಪಕ್ಷವನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಕಳೆದ ಬಾರಿಯೂ ಸರ್ಕಾರ ಈ ವಿಷಕಾರಿ ಮದ್ಯವನ್ನು ಮೆಥನಾಲ್ ಎಂದಷ್ಟೇ ಕರೆದು ಕೈತೊಳೆದುಕೊಂಡಿತ್ತು. ಇದರ ಬದಲು ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಲಾ 10 ಲಕ್ಷ ರೂ. ಪರಿಹಾರ:
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (MK Stalin) 10 ಲಕ್ಷ ರೂ. ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಕುಟುಂಬಕ್ಕೆ ತಲಾ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ನಿವೃತ್ತ ನ್ಯಾ. ಬಿ.ಗೋಕುಲದಾಸ್ ಅವರನ್ನೊಳಗೊಂಡ ಏಕವ್ಯಕ್ತಿ ಆಯೋಗಕ್ಕೆ ಪ್ರಕರಣದ ತನಿಖೆಗೆ ಸೂಚಿಸಿದ್ದು, 3 ತಿಂಗಳಲ್ಲಿ ವರದಿ ನೀಡುವಂತೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್!