ಲಂಡನ್: ವಿಶ್ವದ ಮೊದಲ 360 ಡಿಗ್ರಿಯ ಇನ್‍ಫಿನಿಟಿ ಈಜುಕೊಳ ಲಂಡನ್ ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಈಜುಕೊಳದ ಮಾದರಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರವೇಶ ಮಾಡೋದು ಹೇಗೆ ಎಂದು ನೆಟ್ಟಿಗರು ತಲೆಕೆಡಿಸಿಕೊಳ್ಳುತ್ತಿದ್ದಾರೆ.
6 ಲಕ್ಷ ಲೀಟರ್ ನೀರಿನ ಸಾಮರ್ಥ್ಯವುಳ್ಳ ಈಜುಕೊಳಕ್ಕೆ ‘ಇನ್‍ಫಿನಿಟಿ ಪೂಲ್’ ಎಂದು ಹೆಸರಿಡಲಾಗಿದೆ. 55 ಅಂತಸ್ತಿನ ಕಟ್ಟಡದ ಮೇಲೆ ಈಜುಕೊಳ ನಿರ್ಮಿಸಲು ಪ್ಲಾನ್ ಮಾಡಲಾಗಿದ್ದು, ನಾಲ್ಕು ಕಡೆ ಗ್ಲಾಸ್ ಗಳನ್ನು ತಡೆಗೋಡೆಯಾಗಿ ಮಾಡಲಾಗುವುದು. ತಳಭಾಗವು ಗಾಜಿನಿಂದಲೇ ನಿರ್ಮಿಸುತ್ತಿದ್ದು, ಕಟ್ಟಡದ ಕೆಳಗಿನಿಂದಲೇ ಈಜುಕೊಳ ನೋಡಲು ಸಾಧ್ಯವಾಗಲಿದೆ.
ಈಜುಕೊಳಕ್ಕೆ ಎಂಟ್ರಿ ಹೇಗೆ?
ಕಟ್ಟಡದ ಪೂರ್ಣ ಮೇಲ್ಛಾವಣೆ ಮೇಲೆ ಈಜುಕೊಳ ನಿರ್ಮಾಣವಾಗಲಿದೆ. ಹಾಗಾದ್ರೆ ಕೊಳಕ್ಕೆ ಎಂಟ್ರಿ ಕೊಡೋದು ಹೇಗೆ ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ. ಈಜುಕೊಳಕ್ಕೆ ತೆರಳಲು ಬಯಸುವ ಈಜುಗಾರರು ತಳಭಾಗದಲ್ಲಿ ನಿರ್ಮಿಸುವ ಸುರುಳಿಯಾಕಾರದ ಸ್ಟೇರ್‍ಕೇಸ್ ಮೂಲಕ ಪೂಲ್ ಪ್ರವೇಶ ಮಾಡಬಹುದು ಎಂದು ಕೊಳ ನಿರ್ಮಾಣದ ವಿನ್ಯಾಸಕ ಮತ್ತು ತಾಂತ್ರಿಕ ನಿದೇಶಕ ಅಲೆಕ್ಸ್ ಕೆಮ್‍ಸ್ಲೇ ತಿಳಿಸಿದ್ದಾರೆ.
ಈಜುಕೊಳದ ನಿರ್ಮಾಣಕ್ಕೆ ಮುಂದಾಗಿರುವ ನಮಗೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಕಟ್ಟಡಗಳ ಮೇಲಿನ ಸಾಮಾನ್ಯ ಈಜುಕೊಳಗಳಿಗೆ ಪಕ್ಕದಲ್ಲಿಯೇ ಏಣಿ ಮಾಡಲಾಗಿರುತ್ತದೆ. ಈ ರೀತಿ ಮಾಡುವದರಿಂದ ಇನ್‍ಫಿನಿಟಿ ಕೊಳದ ಸೌಂದರ್ಯ ಕಡಿಮೆ ಆಗಲಿದೆ ಎಂಬ ಭಯ ಉಂಟಾಗಿತ್ತು. ಹೀಗಾಗಿ ಈಜುಗಾರರನ್ನು ಸುರುಳಿಯಾಕಾರದ ಸ್ಟೇರ್ ಕೇಸ್ ಮೂಲಕ ಕೊಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ. ಕೊಳದಲ್ಲಿ ಬಳಕೆಯಾದ ತ್ಯಾಜ್ಯ ನೀರು ಕಟ್ಟಡದ ಯಾವುದೇ ಭಾಗಗಳಿಗೆ ತಲುಪದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂದು ಕೆಮ್‍ಸ್ಲೇ ಹೇಳುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇನ್‍ಫಿನಿಟಿ ಕೊಳದ ಫೋಟೋಗಳು ಹರಿದಾಡುತ್ತಿದ್ದು, ಎಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬುವುದು ರಿವೀಲ್ ಆಗಿಲ್ಲ.