ರಾಯಚೂರು: ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟವಾದ ಉತ್ತರಾರಾಧನೆ ಅಂಗವಾಗಿ ಮಂತ್ರಾಲಯ ಮಠದ ರಾಜಬೀದಿಯಲ್ಲಿ ವಿಜೃಂಭಣೆಯ ಮಹಾರಥೋತ್ಸವ ನೆರವೇರಿತು. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ರಾಯರ ಆರಾಧನಾ ಮಹೋತ್ಸವದ ವೈಭವಕ್ಕೆ ಸಾಕ್ಷಿಯಾದರು.
Advertisement
ಕಲಿಯುಗ ಕಾಮಧೇನು ಗುರು ರಾಘವೇಂದ್ರ ಸಾರ್ವಭೌಮರು ವೃಂದಾವನಸ್ಥರಾದ ಮರುದಿನವನ್ನ ಮಂತ್ರಾಲಯದಲ್ಲಿ ಉತ್ತರಾರಾಧನೆಯಾಗಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಉತ್ತರಾರಾಧನೆ ಹಿನ್ನೆಲೆಯಲ್ಲಿ ನಡೆದ ಮಹಾರಥೋತ್ಸವ ರಾಯರ ಆರಾಧನೆಗೆ ಮೆರಗು ತಂದಿದೆ. ಈ ದಿನ ರಾಯರು ಪ್ರಹ್ಲಾದ ರಾಜರ ಉತ್ಸವ ಮೂರ್ತಿ ರೂಪದಿಂದ ಹೊರ ಪ್ರಾಕಾರದಲ್ಲಿ ಬಂದು ಭಕ್ತರಿಗೆ ರಾಜಬಿದಿಯಲ್ಲಿ ದರ್ಶನ ಕೊಡುತ್ತಾರೆ ಅನ್ನೋ ಪ್ರತೀತಿ ಈಗಲೂ ಇದೆ. ರಥೋತ್ಸವಕ್ಕೂ ಮುನ್ನ ರಾಮದೇವರು ಹಾಗೂ ಬೃಂದಾವನಗಳಿಗೂ ಗುಲಾಲ್ ಸಮರ್ಪಣೆ ಮಾಡುವ ಮೂಲಕ ಶ್ರೀಗಳು ವಸಂತೋತ್ಸವ ಆಚರಿಸಿದರು. ಇದನ್ನೂ ಓದಿ: ಮನೆ ಬಾಡಿಗೆ ವೇಳೆ `ಸೆಕ್ಸ್ ಒಪ್ಪಂದ’ಕ್ಕೆ ಸಹಿ ಹಾಕಿದ ಮಹಿಳೆ- ಮುಂದೇನಾಯ್ತು..?
Advertisement
Advertisement
ಬಳಿಕ ಗುರುರಾಯರನ್ನ ಪ್ರಹ್ಲಾದ ರಾಜರ ರೂಪದಲ್ಲಿ ಸಂಸ್ಕೃತ ಪಾಠಶಾಲೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ನಂತರ ಮಠದ ಮದ್ವದ್ವಾರ ಮೂಲಕ ರಾಜಬೀದಿಯಲ್ಲಿ ಮಹಾರಥೋತ್ಸವ ಜರುಗಿತು. ಮಹಾ ರಥೋತ್ಸವದ ಹಿನ್ನೆಲೆಯಲ್ಲಿ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಥದಲ್ಲಿ ಕುಳಿತು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು. ಧರ್ಮಪಾಲನೆ ಮಾಡಿ ಉನ್ನತಿ ಪಡೆಯಿರಿ, ದೇಶ ಸಕಲ ಸಂಪದ್ಭರಿತವಾಗಲಿ, ದೇಶ ವಿಶ್ವಗುರುವಾಗಲಿ ಎಂದು ಹಾರೈಸಿದರು.
Advertisement
ರಾಯರು ಪ್ರತಿನಿತ್ಯದಲ್ಲಿ ಅಂತರ್ಮುಖವಾಗಿ ಜಪತಪ ಮಾಡುತ್ತಿದ್ದರೆ ಉತ್ತರರಾಧನೆ ದಿನ, ಬಹಿರ್ಮುಖವಾಗಿ ತಮ್ಮ ದೃಷ್ಟಿಯನ್ನ ಭಕ್ತರ ಕಡೆಗೆ ಹರಿಸುತ್ತಾರೆ. ಭಕ್ತರ ಬೇಡಿಕೆ ಈಡೇರಿಸುತ್ತಾರೆ ಅನ್ನೋ ಪ್ರತೀತಿ ಇದೆ. ಹೀಗಾಗಿ ಉತ್ತರಾರಾಧನೆ ದಿನ ರಾಯರ ಅನುಗ್ರಹಕ್ಕೆ ಪಾತ್ರರಾಗಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ರಾಯರ ಮಠಕ್ಕೆ ಆಗಮಿಸಿ ಮಹಾರಥೋತ್ಸವದಲ್ಲಿ ಭಾಗಿಯಾಗಿದ್ದರು. ಸಾಲುಮರದ ತಿಮ್ಮಕ್ಕ ಆರಾಧನೆಯಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದರು. ಇದನ್ನೂ ಓದಿ: ಪ್ರೀತಿಯ ಸುಳಿಗೆ ಸಿಕ್ಕಿಬಿದ್ದ ಬಾಲೆ – ಮದುವೆಯಾಗಲು ಪ್ರಿಯಕರ ಒಪ್ಪದ್ದಕ್ಕೆ ಆತ್ಮಹತ್ಯೆ
ಮಹಾರಥೋತ್ಸವದ ವೇಳೆ ವಿವಿಧೆಡೆಯಿಂದ ಆಗಮಿಸಿದ್ದ ಭಜನಾ ಮಂಡಳಿಗಳು, ಕಲಾತಂಡಗಳು ರಾಜಬೀದಿಯಲ್ಲಿ ರಥೋತ್ಸವಕ್ಕೆ ಮೆರಗು ನೀಡಿದವು. ಹೆಲಿಕ್ಯಾಪ್ಟರ್ ಮೂಲಕ ಪ್ರತಿವರ್ಷದಂತೆ ರಥಕ್ಕೆ ಪುಷ್ಪವೃಷ್ಠಿಯನ್ನ ಮಾಡಲಾಯಿತು. ಈ ಮೂಲಕ ರಾಯರ ಆರಾಧನೆಯ ಮುಖ್ಯ ಮೂರುದಿನಗಳು ಇಂದಿಗೆ ಮುಕ್ತಾಯವಾದವು. ಸಪ್ತರಾತ್ರೋತ್ಸವ ಹಿನ್ನೆಲೆ ಆಗಸ್ಟ್ 16ರ ವರೆಗೆ ಮಠದಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯುತ್ತವೆ.