ಬಾಗಲಕೋಟೆ: ಜಿಲ್ಲೆಯಾದ್ಯಂತ ಒಂದು ವಾರಗಳ ಕಾಲ ಸುರಿದ ಮಳೆಯಿಂದ (Rain) ಇಲ್ಲಿಯವರೆಗೆ 321 ಮನೆಗಳು ಕುಸಿದಿದ್ದು, ಸುಮಾರು 5 ಸಾವಿರಕ್ಕೂ ಅಧಿಕ ಎಕರೆಯಲ್ಲಿ ಬೆಳೆದ ಈರುಳ್ಳಿ ಬೆಳೆ ನಾಶವಾಗಿದೆ ಎಂದು ಬಾಗಲಕೋಟೆ (Bagalkote) ಜಿಲ್ಲಾಡಳಿತ ತಿಳಿಸಿದೆ.
ಸೆ.26 ರಂದು ಸುರಿದ ಮಳೆಯಿಂದ ಮಳೆಯಿಂದ ರಬಕವಿ-ಬನಹಟ್ಟಿ (Rabkavi Banhatti) ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಮನೆ ಕುಸಿದು ಓರ್ವ ಯುವಕ ಬಲಿಯಾಗಿದ್ದಾನೆ. ಇದು ಜಿಲ್ಲೆಯ ಮಳೆ ಹಾನಿಯ ವರದಿಯಾದರೆ ಕಳೆದ ಎರಡು ದಿನ ಸುರಿದ ಮಳೆಗೆ ಇಳಕಲ್ ತಾಲೂಕಿನಾದ್ಯಂತ 35 ಕ್ಕೂ ಹೆಚ್ಚು ಮನೆಗಳ ಕುಸಿತ ಕಂಡಿವೆ.
ಯಾವ ಗ್ರಾಮದಲ್ಲಿ ಎಷ್ಟು ಮನೆ ಕುಸಿತ?
ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ 3, ಬೆನಕನಡೋಣಿ ಗ್ರಾಮದಲ್ಲಿ 5 , ಹಿರೇಕೊಡಗಲಿ ಗ್ರಾಮದಲ್ಲಿ 3, ಕಂಬಳಿಹಾಳ ಗ್ರಾಮದಲ್ಲಿ 1, ತಳ್ಳಿಕೇರಿ ಗ್ರಾಮದಲ್ಲಿ 7, ಗುಡೂರ ಎಸ್.ಬಿ. ಗ್ರಾಮದಲ್ಲಿ 1 , ಅಮರವಾಡಗಿ ಗ್ರಾಮದಲ್ಲಿ 3 , ಕೆಲೂರು ಗ್ರಾಮದಲ್ಲಿ 6, ಗೊರಜನಾಳ ಗ್ರಾಮದಲ್ಲಿ 1, ಗುಡೂರ ಎಸ್.ಸಿ. ಗ್ರಾಮದಲ್ಲಿ 5 ಮನೆಗಳು ಬಿದ್ದಿವೆ ಎಂದು ತಹಸೀಲ್ದಾರ ಕಾರ್ಯಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 21 ರಿಂದ 27 ರವರೆಗೆ 40 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಎರಡು ದಿನಗಳಲ್ಲಿ 93.34 ಮಿ.ಮೀ ಮಳೆಯಾಗಿದ್ದು, ಶೇ. ೧೬೦ ರಷ್ಟು ಅಧಿಕ ಮಳೆಯಿಂದಾಗಿ ಮನೆ ಕುಸಿತ, ಬೆಳೆ ಹಾನಿ ಸಂಭವಿಸಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.