ನವದೆಹಲಿ: ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ 81 ವರ್ಷದ ಅಜ್ಜನ ರೀತಿ ವೇಷ ಧರಿಸಿ, ನಕಲಿ ಪಾಸ್‍ಪೋರ್ಟ್ ಇಟ್ಟುಕೊಂಡು ಬಂದಿದ್ದ 32 ವರ್ಷದ ವ್ಯಕ್ತಿಯೊಬ್ಬ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಸಿಬ್ಬಂದಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.
81 ವರ್ಷದ ವೃದ್ಧ ಪ್ರಯಾಣಿಕನ ಸೋಗಿನಲ್ಲಿ ನಕಲಿ ಪಾಸ್‍ಪೋರ್ಟ್ ಹೊಂದಿದ್ದ ವ್ಯಕ್ತಿಯ ಮುಖವಾಡವನ್ನು ದೆಹಲಿ ವಿಮಾನ ನಿಲ್ದಾಣದ ಸಿಐಎಸ್‍ಎಫ್ ಸಿಬ್ಬಂದಿ ಬಟಾಬಯಲು ಮಾಡಿದ್ದಾರೆ. ಭಾನುವಾರದಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗುಜರಾತಿನ ಅಹಮದಾಬಾದ್‍ನ ನಿವಾಸಿಯಾಗಿರುವ ಜಯೇಶ್ ಪಟೇಲ್(32) ವೃದ್ಧನಂತೆ ವೇಷ ಧರಿಸಿ ಅಮೆರಿಕಕ್ಕೆ ಹಾರಲು ಪ್ಲಾನ್ ಮಾಡಿದ್ದ. ಆದರೆ ಆತನ ಪ್ಲಾನ್‍ಗೆ ಸಿಐಎಸ್‍ಎಫ್ ಸಿಬ್ಬಂದಿ ತಣ್ಣೀರು ಎರೆಚಿದ್ದಾರೆ. ಜಯೇಶ್ ತನ್ನ ತಲೆಗೂದಲು ಮತ್ತು ಗಡ್ಡಕ್ಕೆ ಬಿಳಿ ಬಣ್ಣ ಹಚ್ಚಿಕೊಂಡು, ವೃದ್ಧನಂತೆ ಬಟ್ಟೆ ಧರಿಸಿ, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕಿಗೆ ತೆರಳಲು ವೀಲ್ ಚೇರ್‌ನಲ್ಲಿ ಬಂದಿದ್ದನು.
Advertisement
Advertisement
ಆರೋಪಿ ಅಮ್ರಿಕ್ ಸಿಂಗ್(81) ಹೆಸರಿನ ನಕಲಿ ಪಾಸ್‍ಪೋರ್ಟ್ ಕೂಡ ಹೊಂದಿದ್ದನು. ವಿಮಾನ ನಿಲ್ದಾಣಕ್ಕೆ ಆತ ಬರುತ್ತಿದ್ದಂತೆ ಆತನ ನಡವಳಿಕೆ ನೋಡಿ ಸಿಐಎಸ್‍ಎಫ್ ಸಿಬ್ಬಂದಿಗೆ ಅನುಮಾನ ಬಂದಿತ್ತು. ಪರಿಶೀಲನೆ ನಡೆಸುತ್ತಿದ್ದ ವೇಳೆ ವೀಲ್ ಚೇರ್‌ನಿಂದ ಏಳಲು ತನಗೆ ಆಗಲ್ಲ ಎಂದು ಸಿಬ್ಬಂದಿಗೆ ಮುಖಕೊಟ್ಟು ಮಾತನಾಡಲು ನಿರಾಕರಿಸಿದ್ದ. ಆದ್ದರಿಂದ ಆತನ ಮೇಲೆ ಅನುಮಾನ ಹೆಚ್ಚಾಗಿ ಸಿಬ್ಬಂದಿ ಆತನ ದಾಖಲೆಗಳನ್ನು ಹೆಚ್ಚು ವಿವರವಾಗಿ ಪರಿಶೀಲನೆ ನಡೆಸಿದಾಗ ಆತನ ನಿಜಬಣ್ಣ ಬಯಲಾಗಿದೆ.
Advertisement
Advertisement
ಪಾಸ್‍ಪೋರ್ಟ್‍ನಲ್ಲಿ ಆತನ ವಯಸ್ಸು 81 ಎಂದು ಉಲ್ಲೇಖಿಸಿದ್ದರೂ ಆತನ ಚರ್ಮವನ್ನು ನೋಡಿದಾಗ ಸಿಬ್ಬಂದಿಗೆ ಆತನಿಗೆ ಅಷ್ಟೆಲ್ಲಾ ವಯಸ್ಸಿನಂತೆ ಕಾಣಿಸಲಿಲ್ಲ. ಅಲ್ಲದೆ ಆತ ವಯಸ್ಸಾದಂತೆ ಕಾಣುವುದಕ್ಕೆ ಝೀರೋ ಪವರ್ ಕನ್ನಡಕವನ್ನು ಧರಿಸಿರುವುದು ಸಿಬ್ಬಂದಿಯ ಗಮನಕ್ಕೆ ಬಂದಿದ್ದು, ಆತನ ನಿಜರೂಪ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ನಕಲಿ ಪಾಸ್‍ಪೋರ್ಟ್ ಬಳಕೆ ಹಾಗೂ ಮಾರು ವೇಷ ಧರಿಸಿದ್ದಕ್ಕೆ ಆರೋಪಿಯನ್ನು ಸಿಬ್ಬಂದಿ ವಲಸೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈ ರೀತಿ ಜಯೇಶ್ ಮಾಡಲು ಕಾರಣವೇನು? ಆತ ಅಮೆರಿಕಕ್ಕೆ ಯಾಕೆ ಹೋಗುತ್ತಿದ್ದ ಎನ್ನುವ ಬಗ್ಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಸದ್ಯ ತನಿಖೆ ಮುಂದುವರಿದಿದೆ.