Tuesday, 16th October 2018

Recent News

ಸುಟ್ಟು ಕರಕಲಾಯ್ತು 32 ಮಂದಿ ಪ್ರಯಾಣಿಕರಿದ್ದ ಖಾಸಗಿ ಬಸ್!

ಕೊಪ್ಪಳ: ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಖಾಸಗಿ ಬಸ್ ಸುಟ್ಟು ಕರಕಲಾಗಿರುವ ಘಟನೆ ಯಲಬುರ್ಗಾ ತಾಲೂಕಿನ ಗುನ್ನಾಳ ಕ್ರಾಸ್ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 50 ಕ್ಕೆ ಹೊಂದಿಕೊಂಡಿರುವ ಗುನ್ನಾಳ ಕ್ರಾಸ್ ಬಳಿ ಈ ಅವಘಡ ಸಂಭವಿಸಿದೆ. ಸದ್ಯ ಈ ಅವಘಡದಿಂದ 32 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಸ್ ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿತ್ತು. ಆದರೆ ಗುನ್ನಾಳ ಕ್ರಾಸ್ ಬಳಿ ಏಕಾಏಕಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ.

ಶಾರ್ಟ್ ಸರ್ಕ್ಯೂಟ್ ಆದ ಕುರಿತು ಚಾಲಕನ ಗಮನಕ್ಕೆ ಬಂದ ಕೂಡಲೇ ಅವರು ಪ್ರಯಾಣಿಕರು ಹಾಗೂ ಲಗೇಜ್ ಗಳನ್ನು ಕೆಳಗಿಳಿಸುವಂತೆ ಹೇಳಿದ್ದಾರೆ. ತಕ್ಷಣವೇ ಪ್ರಯಾಣಿಕರು ತಮ್ಮ ಲಗೇಜ್, ಬ್ಯಾಗ್ ಗಳೊಂದಿಗೆ ಬಸ್ ನಿಂದ ಇಳಿದಿದ್ದಾರೆ. ಹೀಗಾಗಿ ಪ್ರಯಾಣಿಕರು ಭಾರೀ ಅವಘಡದಿಂದ ಪಾರಾಗಿದ್ದು, ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಘಟನೆಯ ಮಾಹಿತಿ ಅರಿತ ಕುಷ್ಟಗಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ. ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.

ಈ ಘಟನೆ ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Leave a Reply

Your email address will not be published. Required fields are marked *