ಕಾರವಾರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಆಹಾರ ಇಲಾಖೆ ವಶಪಡಿಸಿಕೊಂಡಿದೆ.
ಇಲ್ಲಿನ ಪರವರ್ಗ ಗ್ರಾಮದ ಗಣೇಶ ನಗರ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ಬೊಲೆರೊ ಪಿಕಪ್ ವಾಹನಕ್ಕೆ ತುಂಬುತ್ತಿದ್ದನು. ಈತನ ಬಗ್ಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ್ವಯ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ವೇಳೆ ಚಾಲಕ ಪರಾರಿಯಾಗಿದ್ದು, ವಾಹನ ಸಮೇತ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
Advertisement
ಮೊಹ್ಮದ್ ಯುಸೂಬ್ ಹಮ್ಮಿದ್ ಎಂಬವರ ಮನೆಯ ಶೆಡ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಅಕ್ಕಿಯನ್ನು ಪಿಕಪ್ ಗೆ ತುಂಬುತ್ತಿದ್ದ ವೇಳೆ ಅಲ್ಲಿನ ಸಾರ್ವಜನಿಕರು ತಹಸೀಲ್ದಾರ್ ಕಛೇರಿಗೆ ಕರೆ ಮಾಡಿ ದೂರು ನೀಡಿದ್ದರು.
Advertisement
Advertisement
ತಹಸೀಲ್ದಾರ್ ಎನ್.ಬಿ ಪಾಟೀಲ್ ಅವರ ಆದೇಶದ ಮೇರೆಗೆ ಕಾರ್ಯಪ್ರವೃತ್ತರಾದ ಆಹಾರ ನಿರೀಕ್ಷಕರು ಹಾಗೂ ಕಂದಾಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. 50 ಕೆಜಿಯ ತೂಕದ 60 ಚೀಲಗಳಲ್ಲಿದ್ದ ಒಟ್ಟು 31 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಅಕ್ಕಿಯನ್ನು ಬಂದರ್ ರಸ್ತೆಯಲ್ಲಿ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ದಾಸ್ತಾನು ಮಳಿಗೆಯಲ್ಲಿ ಶೇಖರಿಸಿಡಲಾಗಿದೆ.
Advertisement
ಅಕ್ಕಿ ಸಾಗಾಟಕ್ಕೆ ಬಳಸಲಾದ ಬೊಲೆರೊ ಪಿಕಪ್ ವಾಹನವನ್ನು ವಶಕ್ಕೆ ಪಡೆದ ಅಧಿಕಾರಿಗಳು ನಗರ ಠಾಣೆಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆ ನಿರೀಕ್ಷಕ ಪ್ರವೀಣ, ಕಂದಾಯ ನಿರೀಕ್ಷಕ ಗಣಪತಿ ಮೇತ್ರಿ, ಮುಠ್ಠಳ್ಳಿ ಗ್ರಾಮ ಲೆಕ್ಕಾದಿಕಾರಿ ಸಲ್ಮಾನ್ ಖಾನ್ ಹಾಗೂ ಇತರ ಸಿಬ್ಬಂದಿಗಳು ಇದ್ದರು.