ಮಹಾ ಕುಂಭಮೇಳ | 300 ಕಿ.ಮೀ ಟ್ರಾಫಿಕ್ ಜಾಮ್ – 48 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಿಲುಕಿದ ಯಾತ್ರಿಕರು!

Public TV
2 Min Read
300 km Traffic Jam To Maha Kumbh Vehicles Reportedly Stuck For 48 Hours

ಪ್ರಯಾಗ್‌ರಾಜ್: ಮಹಾ ಕುಂಭಮೇಳಕ್ಕೆ (Maha Kumbhmela) ಹೋಗುವ ಮಾರ್ಗಗಳಲ್ಲಿ ನೂರಾರು ಕಿ.ಮೀ ಟ್ರಾಫಿಕ್ ಜಾಮ್‌ (Traffic Jam) ಉಂಟಾಗಿದ್ದು, ಸಾವಿರಾರು ಭಕ್ತರು ಹೆದ್ದಾರಿಗಳಲ್ಲಿ ಸಿಲುಕಿಕೊಂಡಿದ್ದಾರೆ. ವಾಹನಗಳ ಸಾಲು 300 ಕಿ.ಮೀ.ವರೆಗೆ ಸಾಲುಗಟ್ಟಿ ನಿಂತಿವೆ ಎಂದು ವರದಿಯಾಗಿದೆ.

300 km Traffic Jam To Maha Kumbh Vehicles Reportedly Stuck For 48 Hours 1

ವಸಂತ ಪಂಚಮಿಯ ಅಮೃತ ಸ್ನಾನದ ನಂತರ, ಜನಸಂದಣಿ ಕಡಿಮೆಯಾಗಬಹುದು ಎಂಬ ಊಹೆಗಳಿದ್ದವು. ಆದರೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಂಚಾರವನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಪ್ರಯಾಗ್‌ರಾಜ್‌ಗೆ ಸಂಪರ್ಕಿಸುವ ಹಲವಾರು ಮಾರ್ಗಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿದ್ದು, ಒಟ್ಟಾರೆ 300 ಕಿ.ಮೀ ವಾಹನ ದಟ್ಟಣೆ ಉಂಟಾಗಿದೆ. ನೆರೆಯ ಮಧ್ಯಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪೊಲೀಸರು ಪ್ರಯಾಗ್‌ರಾಜ್‌ಗೆ ಹೋಗುವ ಮಾರ್ಗದಲ್ಲಿ ವಾಹನ ಸಂಚಾರವನ್ನು ತಡೆದಿದ್ದಾರೆ. ಸುಮಾರು 200-300 ಕಿ.ಮೀ. ಟ್ರಾಫಿಕ್ ಜಾಮ್ ಉಂಟಾಗಿದೆ ಎಂದು ಪೊಲೀಸರು ಭಕ್ತರಿಗೆ ಮನವಿ ಮಾಡುತ್ತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ರೇವಾ ವಲಯದ ಪೊಲೀಸ್ ಮಹಾನಿರ್ದೇಶಕ ಸಾಕೇತ್ ಪ್ರಕಾಶ್ ಪಾಂಡೆ, ವಾರಾಂತ್ಯದ ಜನದಟ್ಟಣೆಯಿಂದಾಗಿ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ. ಪರಿಸ್ಥಿತಿ ಒಂದೆರಡು ದಿನಗಳಲ್ಲಿ ಸರಿಯಾಗುವ ಸಾಧ್ಯತೆಯಿದೆ. ಪ್ರಯಾಗ್‌ರಾಜ್ ಆಡಳಿತದ ಜೊತೆ ಮಾತಾಡಿ ವಾಹನಗಳಿಗೆ ತೆರಳಲು ಅನುಮತಿ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ವಾಹನಗಳು ಹೆದ್ದಾರಿಗಳಲ್ಲಿ 48 ಗಂಟೆಗಳ ಕಾಲ ಸಿಲುಕಿಕೊಂಡಿವೆ ಎಂದು ಹೇಳಲಾಗುತ್ತಿದೆ. ಕೇವಲ 50 ಕಿ.ಮೀ ಕ್ರಮಿಸಲು ಸುಮಾರು 10-12 ಗಂಟೆಗಳು ಬೇಕಾಗುತ್ತದೆ ಎಂದು ಸಂಚಾರದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಇನ್ನೂ ವಾರಣಾಸಿ, ಲಕ್ನೋ ಮತ್ತು ಕಾನ್ಪುರದಿಂದ ಪ್ರಯಾಗ್‌ರಾಜ್‌ಗೆ ಹೋಗುವ ಮಾರ್ಗಗಳಲ್ಲಿ 25 ಕಿ.ಮೀ ವರೆಗೆ ಸಂಚಾರ ದಟ್ಟಣೆ ಕಂಡುಬಂದಿದೆ ಎಂದು ವರದಿಯಾಗಿದೆ. ಕುಂಭಮೇಳದ ಬಳಿ ಸಹ ಸುಮಾರು 7 ಕಿ.ಮೀ ಸಂಚಾರ ದಟ್ಟಣೆ ಕಂಡುಬಂದಿದೆ.

ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಪ್ರಯಾಗ್‌ರಾಜ್ ಸಂಗಮ್ ರೈಲು ನಿಲ್ದಾಣವನ್ನು ಮುಚ್ಚಲಾಗಿದೆ.

ಇಂದು ಪವಿತ್ರ ಸಂಗಮದಲ್ಲಿ 46 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ. ಕಳೆದ ತಿಂಗಳು ಮಹಾ ಕುಂಭ ಆರಂಭವಾದಾಗಿನಿಂದ ಒಟ್ಟು 44 ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article