ಮುಂಬೈ: ವಿದೇಶಕ್ಕೆ ಮಕ್ಕಳನ್ನು ಮಾರಾಟ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯು ಗುಜರಾತ್‍ನ ರಾಜುಭಾಯ್ ಗಮ್ಳೆವಾಲಾ ಅಲಿಯಾಸ್ ರಾಜುಭಾಯ್ ಆಗಿದ್ದಾನೆ. ಆರೋಪಿಯು 2007 ರಿಂದಲೂ ಮಕ್ಕಳ ಮಾರಾಟ ದಂಧೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾನೆ. ಒಂದು ಮಗುವನ್ನು ಅಮೆರಿಕಕ್ಕೆ 45 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.
Advertisement
ಭಾರತದಿಂದ ಅಮೆರಿಕಕ್ಕೆ ಸುಮಾರು 300 ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯರನ್ನು ತಲಾ 45 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಹೆಚ್ಚಿನವರು ಗುಜರಾತ್ ಮೂಲದ ಮಕ್ಕಳಾಗಿದ್ದಾರೆ. ಗುಜರಾತಿನ ಬಡ ಕುಟುಂಬಗಳು ತಮ್ಮ 11 ರಿಂದ 16 ವರ್ಷದ ಮಕ್ಕಳನ್ನು ಸಾಕಲಾಗದೇ ರಾಜುಭಾಯ್‍ನಿಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟವಾದ ನೂರಾರು ಮಕ್ಕಳ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಮಾರಾಟ ಹೇಗೆ ನಡೆಯುತ್ತಿತ್ತು? ಹೇಗೆ ಅಮೆರಿಕಕ್ಕೆ ಕಳುಹಿಸುತ್ತಿದ್ದರು?
ಅಮೆರಿಕದಿಂದ ಮಕ್ಕಳನ್ನು ಕೊಂಡುಕೊಳ್ಳಲು ಗಿರಾಕಿಗಳು ಆರ್ಡರ್ ಮಾಡಿದ ಕೂಡಲೇ ರಾಜುಭಾಯ್ ಹಾಗೂ ಆತನ ಸಹಚರರು ಬಡ ಕುಟುಂಬದ ಮಕ್ಕಳನ್ನು ಹುಡುಕುತ್ತಿದ್ದರು. ಹೆಚ್ಚಾಗಿ ಇವರಿಗೆ ಗುಜರಾತಿನ ಮೂಲದವರು ತಮ್ಮ ಹೆತ್ತಮಕ್ಕಳನ್ನೇ ಮಾರಾಟ ಮಾಡುತ್ತಿದ್ದರು. ಮಗುವನ್ನು ಪಡೆದುಕೊಂಡ ಬಳಿಕ, ಮಗುವಿನ ಹೋಲಿಕೆಯನ್ನೇ ಹೋಲುವ ಪಾಸ್‍ಪೋರ್ಟ್ ಹೊಂದಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸುತ್ತಿದ್ದರು. ಅವರಿಂದ ಅಸಲಿ ಪಾಸ್‍ಪೋರ್ಟ್ ಪಡೆದುಕೊಂಡು ಮಕ್ಕಳಿಗೆ ಪಾಸ್‍ಪೋರ್ಟ್‍ನಲ್ಲಿರುವಂತೆಯೇ ಮೇಕ್‍ಅಪ್ ಮಾಡಿಸುತ್ತಿದ್ದರು. ನಂತರ ಮಗುವನ್ನು ಅಮೆರಿಕಕ್ಕೆ ಕಳುಹಿಸಿ, ಅಸಲಿ ಪಾಸ್‍ಪೋರ್ಟ್‍ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುತ್ತಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.
Advertisement
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಬಾಲಿವುಡ್ ನಟಿ ಪ್ರೀತಿ ಸೂದ್‍ರವರು ಇದೇ ತಿಂಗಳ ಮಾರ್ಚ್ ನಲ್ಲಿ ನಗರದ ಸಲೂನ್‍ಗೆ ಹೋಗಿದ್ದಾರೆ. ಈ ವೇಳೆ ಸಲೂನ್‍ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೇಕಪ್ ಮಾಡುತ್ತಿದ್ದನ್ನು ಕಂಡು ಪ್ರಶ್ನಿಸಿದ್ದಾರೆ. ಮಕ್ಕಳ ಜೊತೆ ಬಂದಿದ್ದ ಮೂವರು ವ್ಯಕ್ತಿಗಳು, ಇವರು ಅಮೆರಿಕ ದೇಶದವರಾಗಿದ್ದು, ಅವರ ಪೋಷಕರ ಬಳಿ ಕಳುಹಿಸಿ ಕೊಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ನಟಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳ ಕಳ್ಳ ಸಾಗಾಣಿಕೆ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಿವೃತ್ತ ಪೊಲೀಸ್ ಇನ್ಸ್‍ಫೆಕ್ಟರ್ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಆದರೆ ಪ್ರಕರಣದ ಕಿಂಗ್‍ಪಿನ್ ರಾಜುಭಾಯ್ ತಲೆಮರೆಸಿಕೊಂಡಿದ್ದ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ವಾಟ್ಸಪ್ ಮೂಲಕ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ನಕಲು ಮಾಡಿದ್ದ ಆರೋಪದ ಮೇರೆಗೆ ಶಿಕ್ಷೆ ಅನುಭವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 34 ಹಾಗೂ 373ರಡಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 18ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಪರಮ್‍ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv