ಮಡಿಕೇರಿಯ ಈ ಗ್ರಾಮದ 30 ಯುವಕರಿಗಿಲ್ಲ ಕಂಕಣ ಭಾಗ್ಯ

Public TV
2 Min Read
MADIKERI HOSAKOTE 1

ಮಡಿಕೇರಿ: ಅವರದ್ದು ಮದುವೆ ಮಾಡ್ಕೊಂಡು ಹೆಂಡತಿ, ಮಕ್ಕಳ ಜೊತೆ ಹಾಯಾಗಿರಬೇಕಾಗಿರೋ ವಯಸ್ಸು. ಆದರೆ ಮದುವೆ (Marriage) ಮಾಡ್ಕೊಂಡು ಸುಂದರ ಸಾಂಸಾರಿಕ ಜೀವನ ನಡೆಸಬೇಕಂದ್ರೆ ಹಣೆಬರಹಕ್ಕೊಂದು ಕನ್ಯೆ ಸಿಗುತ್ತಿಲ್ಲ. ಕನ್ಯೆ ಕೊಡೋಕೆ ಅಂತಾ ಬಂದ್ರೆ, ಬಂದ ಬೀಗರೆಲ್ಲಾ ಅವರ ಊರಿನ ಅವಸ್ಥೆ ನೋಡಿ ಓಡಿ ಹೋಗ್ತಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಮದುವೆಯಾಗ್ಬೇಕಾಗಿರೋ ಸುಮಾರು 30 ಯುವಕರಿಗೆ ಕಂಕಣಭಾಗ್ಯವೇ ಇಲ್ಲ.

MADIKERI HOSAKOTE 2

ಹೌದು. ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ 6ನೇ ಹೊಸಕೋಟೆ (Hosakote Village) ಗ್ರಾಮದಲ್ಲಿ ಸುಮಾರು 100ಕ್ಕೂ ಅಧಿಕ ದಲಿತ ಕುಟುಂಬಗಳು ವಾಸವಿದೆ. ಈ ಗ್ರಾಮಕ್ಕೆ ಸಂಪರ್ಕ ರಸ್ತೆಯ ಸ್ಥಿತಿ ಹೇಳತೀರದಾಗಿದೆ. ಅಲ್ಲದೇ ಈ ಗ್ರಾಮಕ್ಕೆ ಕೊಡಗು ಜಿಲ್ಲಾ ಪಂಚಾಯ್ತಿ ವತಿಯಿಂದ ಮಿನಿ ಕುಡಿಯುವ ನೀರಿನ ಟ್ಯಾಂಕನ್ನು ನಿರ್ಮಾಣ ಮಾಡಿ ಬಹಳ ಕಾಲ ಕಳೆದ್ರೂ ಇನ್ನೂ ಕೂಡ ಜನರಿಗೆ ಕುಡಿಯಲು ನೀರು ಬಿಟ್ಟಿಲ್ಲ. ಕೆಲವೆಡೆ ಕಾಮಗಾರಿಯನ್ನು ಕೂಡ ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಗ್ರಾಮಕ್ಕೆ ಕುಡಿಯುವ ನೀರಿನಲ್ಲಿ ಚರಂಡಿ ಮಿಶ್ರಿತ ನೀರು ನಲಿಗಳಲ್ಲಿ ಬರುತ್ತಿದ್ದು, ಹಲವಾರು ಜನರು ರೋಗ ಪೀಡಿತರಾಗಿದ್ದಾರೆ. ಹೀಗಾಗಿ ಈ ಊರಿಗೆ ಹೆಣ್ಣು ಕೊಡಲು ಬರುವವರು ಊರಿನ ಪರಿಸ್ಥಿತಿ ಕಂಡು ವಾಪಸ್ಸಾಗುತ್ತಿದ್ದಾರೆ.

ಗ್ರಾಮಕ್ಕೆ ಐದು ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ರಸ್ತೆ ಬದಿಯಲ್ಲಿ ಕೊಳವೆ ಬಾವಿ ನಿರ್ಮಾಣ ಮಾಡಲಾಗಿತ್ತು. ಆದರೆ ಕೊಳವೆ ಬಾವಿಗೆ ಅಳವಡಿಸಿರೋ ಮೋಟಾರ್ ಪಂಪನ್ನು ಇಲ್ಲಿನ ಗ್ರಾಮ ಪಂಚಾಯ್ತಿಯ ಸದಸ್ಯ ತೆಗೆದುಕೊಂಡು ಹೋಗಿದ್ದಾರೆ. ಜನಪ್ರತಿನಿಧಿಗಳು ಗ್ರಾಮದ ಅಭಿವೃದ್ಧಿಯ ಬಗ್ಗೆ ಗಮನಹರಿಸಬೇಕು. ನಮ್ಮ ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲ ಆದ್ದರಿಂದ ಮನೆಯ ಮುಂಭಾಗ ತ್ಯಾಜ್ಯದ ನೀರು ಶೇಖರಣೆಯಾಗಿ ಸೊಳ್ಳೆಗಳ ಸಂತತಿ ಹೆಚ್ಚಾಗಿ ಡೆಂಗ್ಯೂ ಮಲೇರಿಯಾದಂತ ಕಾಯಿಲೆಗಳು ಬರುತ್ತಿದೆ. ಮಕ್ಕಳಲ್ಲಿ ಹಿರಿಯರಲ್ಲಿ ರೋಗಗಳು ಕಂಡು ಬರುತ್ತಿದೆ. ಅನೇಕ ರೋಗ ರುಜಿನದಿಂದ 10-15 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ನಮ್ಮ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಬ್ರಹ್ಮಚಾರಿಗಳೇ ಉಳಿಯೋ ಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

MADIKERI HOSAKOTE

ಗ್ರಾಮದ ಪರಿಸ್ಥಿತಿ ಬಗ್ಗೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನ ನಿಮ್ಮ ಪಬ್ಲಿಕ್ ಟಿವಿ ಪ್ರಶ್ನಿಸಿದ್ರೆ ಗ್ರಾಮದಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಕಳೆದ ತಿಂಗಳು ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆಗೆ ಮುಕ್ತಿ ನೀಡಿದ್ದೇವೆ. ಗ್ರಾಮಸ್ಥರು ಇದುವರೆಗೂ ತಮ್ಮ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಅಂತ ಲಿಖಿತವಾಗಿ ದೂರು ನೀಡಿಲ್ಲ. ಜೆಜೆಎಂನಿಂದ ಕುಡಿಯುವ ನೀರಿನ ಟ್ಯಾಂಕ್ (Water Tank) ನಿರ್ಮಾಣ ಕಾರ್ಯ ಮುಗಿದಿದೆ. ಹಾಗೇನಾದ್ರೂ ಇದ್ರೆ ದೂರು ಕೊಡಲಿ ಅಂತಿದ್ದಾರೆ.

ಒಟ್ಟಿನಲ್ಲಿ 6ನೇ ಹೊಸಕೋಟೆ ಗ್ರಾಮಕ್ಕೆ ಇನ್ನಾದ್ರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದು ಗ್ರಾಮದಲ್ಲಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನ ಪರಿಹರಿಸಬೇಕಿದೆ.

Share This Article