– ದೆಹಲಿ ಸಭೆಗೆ ಹಾಜರಾಗಿದ್ದ ಆರೋಪಿಗಳು
– ಬಂಧಿತರಲ್ಲಿ 16 ವಿದೇಶಿಯರು
ಲಕ್ನೋ: ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್‍ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್‍ನ ಮಸೀದಿಯಲ್ಲಿ ತಮ್ಮ `ಅಕ್ರಮ’ ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
Advertisement
Advertisement
ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾದ ಜಮಾತಿಗಳ ಉಪಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿಲ್ಲ ಎಂಬ ಆರೋಪ ಪ್ರೊ. ಮೊಹಮ್ಮದ್ ಶಾಹಿದ್ ಮೇಲಿದೆ. ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ.
Advertisement
ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್‍ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್‍ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
Advertisement
ಆರೋಪಿಗಳಿಗೆ ಪ್ರಯಾಗರಾಜ್‍ಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಆದರೂ ಅವರು ನಗರಕ್ಕೆ ಭೇಟಿ ನೀಡಿದ್ದಷ್ಟೇ ಅಲ್ಲದೆ ಮಸೀದಿಯಲ್ಲಿ ಅಡಗಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಸಂಬಂಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ವಿದೇಶಿಯರು ಮತ್ತು ಪ್ರೊಫೆಸರ್ ಶಾಹಿದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈವರೆಗೆ ಪ್ರಯಾಗರಾಜ್‍ನಲ್ಲಿ ಕೇವಲ ಒಂದು ಕೋವಿಡ್-19 ಸೋಂಕಿತರಿದ್ದು, ಚಿಕಿತ್ಸೆಯ ನಂತರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶೇಕಡಾ 79ರಷ್ಟು ಕೊರೊನಾ ವೈರಸ್ ರೋಗಿಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವರೇ ಆಗಿದ್ದಾರೆ.