ಮಂಡ್ಯ: ತಾಲೂಕಿನ ಕೀಲಾರ ಗ್ರಾಮದ ರೈತ ಸಹೋದರರ ಮನೆಯಲ್ಲಿ ರಾಸುಗಳ ಸರಣಿ ಸಾವು ಮುಂದುವರೆದಿದ್ದು, ಗುರುವಾರ ಬೆಳಿಗ್ಗೆ 30ನೇ ರಾಸು ವಿಚಿತ್ರವಾಗಿ ವರ್ತಿಸಿ ನಿಗೂಢ ಸಾವನ್ನಪ್ಪಿದೆ.
Advertisement
ರಾಸು ಉಳಿಸಲು ಮಾಡಿದ ಕುಟುಂಬದ ಪ್ರಾರ್ಥನೆ, ವೈದ್ಯರ ಉಪಚಾರವೂ ಫಲಿಸದೇ ಒಂದೇ ಸಮನೆ ಒದ್ದಾಡಿ ಪ್ರಾಣ ಬಿಟ್ಟಿರುವುದು ಕುಟುಂಬದ ಸದಸ್ಯರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಕಳೆದ ಮೂರು ವರ್ಷಗಳಲ್ಲಿ 28 ರಾಸುಗಳು ಸಾವನ್ನಪ್ಪಿದ ಘಟನೆ ಬಳಿಕ ಸೆ.10ರಂದು ಗಣೇಶ ಹಬ್ಬದ ದಿನ ಜೋಡಿ ಜಾನುವಾರುಗಳಲ್ಲಿ ಒಂದು ರಾಸು ನಿಗೂಢವಾಗಿ ಸಾವನ್ನಪ್ಪಿತ್ತು. ಗುರುವಾರ ಬೆಳಿಗ್ಗೆ ಎಂದಿನಂತೆ ರೈತ ಕೃಷ್ಣೇಗೌಡ ಕೊಟ್ಟಿಗೆಯಲ್ಲಿದ್ದ ರಾಸುವನ್ನು ಹೊರಗೆ ಕಟ್ಟಿ ಹಾಕಿದ್ದಾರೆ. ಅರ್ಧ ಗಂಟೆಯೊಳಗೆ ರಾಸು ವಿಚಿತ್ರವಾಗಿ ವರ್ತಿಸಿದೆ. ಇದನ್ನು ಕಂಡ ಕೃಷ್ಣೇಗೌಡ ಅದೇ ಗ್ರಾಮದ ಕೆ.ಎಂ.ಬಸವರಾಜು ಅವರನ್ನು ಮನೆಯ ಕೊಟ್ಟಿಗೆಗೆ ಕರೆತಂದಿದ್ದಾರೆ. ಆಗ ಸ್ವಲ್ಪ ಸುಧಾರಿಸಿದಂತೆ ಕಂಡು ಬಂದ ಹಸು ಮತ್ತೆ ವಿಚಿತ್ರವಾಗಿ ವರ್ತಿಸಿ ಕೆಳಗೆ ಬಿದ್ದು ಮೈಯೆಲ್ಲ ಒದರುತ್ತಾ ಒದ್ದಾಡಿದೆ. ಇದನ್ನೂ ಓದಿ: ಅತ್ಯಾಚಾರಿಗಳ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗಿಲ್ಲ: ಎಎಪಿ
Advertisement
Advertisement
ಈ ದೃಶ್ಯ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರ ಕರುಳು ಹಿಂಡುತ್ತಿತ್ತು. ಕೂಡಲೇ ಮಾಹಿತಿ ತಿಳಿದ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ರಮೇಶ್‍ರಾಜು ಸಿಬ್ಬಂದಿ ಜತೆ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪಶು ಇಲಾಖೆ ಉಪನಿರ್ದೇಶಕ ಡಾ.ಮಂಜುನಾಥ್, ಮಂಡ್ಯ ಪಾಲಿ ಕ್ಲಿನಿಕ್ ಉಪನಿರ್ದೇಶಕ ಸುಬ್ರಹ್ಮಣ್ಯ ಪ್ರಸಾದ್, ಜಿಲ್ಲಾ ಪಶುತಜ್ಞರಾದ ಡಾ.ತ್ರಿನೇಶ್, ಡಾ.ಶಿವಯ್ಯ, ಡಾ.ಯೋಗೇಶ್ ಗೌಡ ಹಾಗೂ ಡಾ.ಸಿದ್ದರಾಮು ತಂಡ ಸುಮಾರು 2 ಗಂಟೆಗಳ ಕಾಲ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ರಾಸು ಪ್ರಾಣ ಬಿಟ್ಟಿದೆ. ಇದನ್ನೂ ಓದಿ: ಹೆಚ್ಚಾದ ಭೀಮಾ ನದಿ ಒಳಹರಿವು – ಯಾದಗಿರಿ ವೀರಾಂಜನೇಯ, ಕಂಗಳೇಶ್ವರ ದೇಗುಲ ಜಲಾವೃತ
Advertisement
ಇದನ್ನು ಕಣ್ಣಾರೆ ಕಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ವೃತ್ತ ನಿರೀಕ್ಷಕ ಕ್ಯಾತೇಗೌಡ, ಪಿಎಸ್‍ಐ ಭೀಮಪ್ಪ ಸ್ಥಳ ಪರಿಶೀಲನೆ ನಡೆಸಿ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಮೇರೆಗೆ ಆಗಮಿಸಿದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಜಂಟಿ ನಿರ್ದೇಶಕ ಡಾ.ರವೀಂದ್ರ ಹೆಗಡೆ, ರೋಗ ಶಾಸ್ತ್ರ ತಜ್ಞ ಡಾ.ಶಿವಶಂಕರ್, ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ವಿಷಶಾಸ್ತ್ರ ತಜ್ಞ ಡಾ.ಸಂತೋಷ್, ಮೈಸೂರು ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ.ಸಿ.ವೀರಭದ್ರಯ್ಯ ಅವರು ರೈತ ಸಹೋದರರ ಮನೆ ಹಾಗೂ ರಾಸುಗಳನ್ನು ಕಟ್ಟಿ ಹಾಕುವ ಕೊಟ್ಟಿಗೆಯನ್ನು ಪರಿಶೀಲಿಸಿ ಘಟನೆ ಕುರಿತು ಹೆಚ್ಚಿನ ಮಾಹಿತಿ ಪಡೆದು ರಾಸುವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.