– ಅಕ್ಷರಸ್ಥರನ್ನಾಗಿ ಮಾಡುವುದು ಇವರ ಗುರಿ
ಲಕ್ನೋ: ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳನ್ನು ಕೇವಲ 30 ಗಂಟೆಗಳಲ್ಲಿ ಅಕ್ಷರಸ್ಥರನ್ನಾಗಿ ಮಾಡುವ ಮಾದರಿ ಕೆಲಸವನ್ನು ಉತ್ತರ ಪ್ರದೇಶದಲ್ಲಿ ಶಿಕ್ಷಣ ತಜ್ಞೆಯೊಬ್ಬರು ಮಾಡುತ್ತಿದ್ದಾರೆ. ಸುನೀತಾ ಗಾಂಧಿ ಅವರು ಉಚಿತವಾಗಿ ಮಕ್ಕಳಿಗೆ ಅಕ್ಷರ ಕಲಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಕಳೆದ 5 ವರ್ಷಗಳಿಂದ ಸುನೀತಾ ಗಾಂಧಿ ಗ್ಲೋಬಲ್ ಡ್ರೀಮ್ಸ್ ಪ್ರಾಜೆಕ್ಟ್ ಅಡಿಯಲ್ಲಿ ಬಡಮಕ್ಕಳನ್ನೆಲ್ಲಾ ಒಟ್ಟುಗೂಡಿಸಿ ಅಕ್ಷರ ಕಲಿಸುತ್ತಿದ್ದಾರೆ. ಇವರಿಗಾಗಿಯೇ ಪ್ರತ್ಯೇಕ ಪಠ್ಯಕ್ರಮವನ್ನು ರೂಪಿಸಿದ್ದಾರೆ. ಕೇವಲ 30 ಗಂಟೆಯಲ್ಲಿ ತಮ್ಮದೇ ಆದ ವಿಶಿಷ್ಟ ಬೋಧನೆಯ ಮೂಲಕ ಪಾಠವನ್ನು ಹೇಳುತ್ತಿದ್ದಾರೆ.
7-8 ತಿಂಗಳು ಶಾಲೆ ತಪ್ಪಿದ್ದಕ್ಕೇ ಜಗತ್ತು ಪರಿತಪಿಸುತ್ತಿದೆ. ಇನ್ನು ಶಾಲೆಯ ಮೆಟ್ಟಿಲನ್ನೇ ಏರದೆ ಬೀದಿ ಬದಿಯ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಈ ಒಂದು ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅಕ್ಷರ ಕಲಿಸುವ ಈ ಯೋಜನೆಯನ್ನು ದೇಶದಾದ್ಯಂತ ಕೈಗೊಳ್ಳುವ ನಿರ್ಧಾರವನ್ನು ಮಾಡಿಕೊಂಡಿದ್ದಾರೆ.
ಒಟ್ಟು 10 ಅವಧಿಗಳಲ್ಲಿ ಸುನೀತಾ ಅವರು ಮಕ್ಕಳಿಗೆ ಪಾಠವನ್ನು ಬೋಧಿಸುತ್ತಾರೆ. ಪಾಠವನ್ನು ಪುನರಾವರ್ತನೆ, ಅಭ್ಯಾಸ ಮಾಡುವುದ್ದಕ್ಕಿಂತ ಹೆಚ್ಚಾಗಿ ಪ್ರಶ್ನೆಯನ್ನು ಕೇಳುತ್ತಾರೆ. ಈ ಮೂಲಕವಾಗಿ ಉತ್ತರವನ್ನು ಶಾಶ್ವತವಾಗಿ ಮಕ್ಕಳು ನೆನೆಪಿಟ್ಟುಕೊಳ್ಳುವ ಚಾತುರ್ಯವನ್ನು ಕಲಿಸಿಕೊಡುತ್ತಾರೆ. ಅಕ್ಷರ-ಪದಗಳನ್ನು ಗುರುತಿಸುವುದನ್ನು ಹೇಳಿಕೊಡುತ್ತಾರೆ.
ಚಿತ್ರಗಳ ಮೂಲಕವಾಗಿ ಪದ ಮತ್ತು ವಾಕ್ಯ ರಚನೆಯನ್ನು ಮಕ್ಕಳಿಂದ ಮಾಡಿಸುತ್ತಾರೆ. ವೀಡಿಯೋ ಮತ್ತು ಆಡಿಯೋಗಳ ಮೂಲಕವಾಗಿ ಪಾಠವನ್ನು ಹೇಳುತ್ತಾರೆ. ಮಕ್ಕಳಿಗೆ ಬೇಸರ ಬರದ ರೀತಿಯಲ್ಲಿ ಆಟದ ಮೂಲಕವಾಗಿ ಮನೋರಂಜನಾಭರಿತವಾಗಿ ಮಕ್ಕಳಿಗೆ ಅಕ್ಷರವನ್ನು ಕಲಿಸುತ್ತಾರೆ. ಇದಕ್ಕಾಗಿಯೇ 30 ಪಾಠಗಳನ್ನೋಳಗೊಂಡ ಕಿಟ್ ಸಿದ್ಧಪಡಿಸಿದ್ದಾರೆ. 60 ಕಿರು ವೀಡಿಯೋ ಹಾಗೂ ಬುಕ್ಸ್ ಅಲ್ಭಾಬೆಟ್ ಕಟೌಟ್ ಮತ್ತು ಸ್ಟೇಷನರಿ ಐಟಮ್ಸ್ ಇವರ ಶಿಕ್ಷಣದ ಕಿಟ್‍ನಲ್ಲಿದೆ. ವಿಭಿನ್ನವಾಗಿ ಮಕ್ಕಳಿಗೆ ಅತೀ ಕಡಿಮೆ ಅವಧಿಯಲ್ಲಿ ಅಕ್ಷರವನ್ನು ಕಲಿಸಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.
ಮುಂದಿನ ವರ್ಷ ಅಂತ್ಯದೊಳಗೆ 20 ರಾಜ್ಯಗಳಲ್ಲಿ, ಶಾಲೆಗಳಿಂದ ಹೊರಗುಳಿದ 20 ಲಕ್ಷ ಮಕ್ಕಳನ್ನು ಸಾಕ್ಷರಸ್ಥರನ್ನಾಗಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಶಿಕ್ಷಣ ತಜ್ಞೆ ಸುನೀತಾ ಗಾಂಧಿ ಹೇಳುತ್ತಾರೆ.