30ಕ್ಕೂ ಹೆಚ್ಚಿನ ದೇಶಗಳ ಅನಿವಾಸಿ ಕನ್ನಡಿಗರಿಂದ ಜ.2ರಂದು ‘ಎನ್‍ಆರೈ ಅಪೀಲ್ ಡೇ’ ಅಭಿಯಾನ!

Public TV
3 Min Read
VidhanaSoudhaaa

ಬೆಂಗಳೂರು: ತಮಗಿರುವ ಸಮಸ್ಯೆಗಳ ಬಗ್ಗೆ, ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಮಧ್ಯಾಹ್ನ ಭಾರತೀಯ ಕಾಲಮಾನ ಸಂಜೆ 4ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.

ತಮ್ಮ ಕುಟುಂಬದ ಜವಾಬ್ದಾರಿ ಹೊತ್ತು ಉದ್ಯೋಗ ಅರಸಿ ವಿದೇಶಕ್ಕೆ ತೆರಳಿದರೂ ಹುಟ್ಟೂರು ಮತ್ತು ರಾಜ್ಯದ ಆಗುಹೋಗುಗಳ ಬಗ್ಗೆ ಅತಿ ಹೆಚ್ಚು ಕಾಳಜಿ ತೋರಿಸುವವರು ಅನಿವಾಸಿ ಕನ್ನಡಿಗರು, ರಾಜ್ಯದಲ್ಲಿ ನೆರೆ ಬಂದರೂ, ಬರ ಬಂದರೂ, ಯಾವುದೇ ಸಂಕಷ್ಟ ಬಂದೊದಗಿದರೂ ತಕ್ಷಣ ಸಹಾಯಹಸ್ತ ಚಾಚುವವರೇ ಲಕ್ಷಾಂತರ ಅನಿವಾಸಿಗಳು, ಆದರೆ ಆಶ್ಚರ್ಯವೆಂದರೆ ಈ ಅನಿವಾಸಿಗಳ ಬೇಡಿಕೆಗಳಿಗೆ ಸ್ಪಂದಿಸುವವರೇ ಇಲ್ಲ. ಬಹುಕಾಲದಿಂದ ಅವರ ಬೇಡಿಕೆಗಳ ಪಟ್ಟಿ ಬೆಳೆಯುತ್ತಾ ಇದ್ದರೂ ಅಧಿಕಾರಕ್ಕೆ ಬಂದ ಯಾವುದೇ ಸರ್ಕಾರ ಈ ಬಗ್ಗೆ ಗಮನ ಹರಿಸಿಲ್ಲ. ಕೊರೊನಾ ಸಂಕಷ್ಟ ಸಂದರ್ಭದಲ್ಲಂತೂ ಇವರ ಗೋಳನ್ನು ಕೇಳುವವರೇ ಇರಲಿಲ್ಲ. ಇದೇ ಕಾರಣಕ್ಕೆ ಇದೀಗ ಅನಿವಾಸಿಗಳು ಒಗ್ಗಟ್ಟಾಗಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಲೆಂದೇ ಒಂದು ದಿನವನ್ನು ಆಚರಿಸಲು ನಿರ್ಧರಿಸಿದ್ದು, ಅಭಿಯಾನದ ವಿಶಿಷ್ಟ ರೀತಿಯಲ್ಲಿ ಕರ್ನಾಟಕ ಸರ್ಕಾರದ ಕದತಟ್ಟಿ ಈ ಬಾರಿಯಾದರೂ ತಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು, ಮಂತ್ರಿಗಳು ಸ್ಪಂದಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

12 ವರ್ಷಗಳ ಹಿಂದೆ ರಾಜ್ಯಸರ್ಕಾರ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಕ್ಷೇಮಾಭಿವೃದ್ಧಿಯಗಾಗಿ ಸ್ಥಾಪಿತವಾದ ಸಮಿತಿಯೇ ಕನ್ನಡಿಗರ ಅನಿವಾಸಿ ಭಾರತೀಯ ಸಮಿತಿ. ಸಿಎಂರವರ ನೇರ ನಿಯಂತ್ರಣಕ್ಕೆ ಒಳಪಡುವ ಈ ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿ ಈ ಸಮಿತಿ ಬಂದರೂ ಮುಖ್ಯಮಂತ್ರಿಗಳೇ ಇದರ ಅಧ್ಯಕ್ಷರು, ಮುಖ್ಯಮಂತ್ರಿಗಳಿಗೆ ಸರ್ಕಾರದ ಇತರ ಗಂಭೀರ ಜವಾಬ್ದಾರಿಗಳಿರುವ ಕಾರಣ ಉಪಾಧ್ಯಕ್ಷರಿಗೆ ಈ ಸಮಿತಿಯೇ ಬೆನ್ನೆಲುಬು, ಆದರೆ ಕಳೆದ ಮೂರು ವರ್ಷಗಳಿಂದ ಈ ಸಮಿತಿಗೆ ಉಪಾಧ್ಯಕ್ಷರೇ ಇಲ್ಲದೇ ಅನಾಥವಾಗಿದೆ.

twitter app icon ios

ಎನ್‍ಆರೈ ಘಟಕದ ಉಪಾಧ್ಯಕ್ಷ ಕೂಡಲೇ ನೇಮಕವಾಗಬೇಕು, ಅದೂ ಅನಿವಾಸಿಗಳ ಬಗ್ಗೆ ಅರಿವಿರುವ ಒಬ್ಬ ಅನಿವಾಸಿ ಕನ್ನಡಿಗನೇ ಈ ಸ್ಥಾನಕ್ಕೆ ನೇಮಕವಾದರೆ ಅನಿವಾಸಿಗಳಿಗೆ ಅನುಕೂಲ. ಎಲ್ಲರೂ ನೇರವಾಗಿ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ, ಉಪಾಧ್ಯಕ್ಷರಿದ್ದರೆ ಸಮಸ್ಯೆ ತಿಳಿಸಲು ಸುಲಭ. ಇದಷ್ಟೇ ಅಲ್ಲದೆ ತಮ್ಮಲ್ಲಿರುವ ಹಲವಾರು ಸಮಸ್ಯೆಗಳ, ಬೇಡಿಕೆಗಳ ಪಟ್ಟಿಯೊಂದಿಗೆ ವಿಶ್ವದಾದ್ಯಂತ ಅನಿವಾಸಿ ಕನ್ನಡಿಗರು ಸರ್ಕಾರಕ್ಕೆ ಮನವಿ ಸಲ್ಲಿಸಲು ಜನವರಿ 2ರಂದು ‘ಎನ್‍ಆರೈ ಅಪೀಲ್ ಡೇ’ ಎಂದು ಟ್ವಿಟ್ಟರ್ ಅಭಿಯಾನ ಮತ್ತು ಇಮೇಲ್ ಮೂಲಕ ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ, ನೂರಾರು ಕನ್ನಡ ಪರ ಸಂಘಟನೆಗಳು ಭಾಗವಹಿಸಲಿದೆ ಎಂದು ಅಂತರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್ ಹೇಳಿದ್ದಾರೆ.

ನಾವು ಕರ್ನಾಟಕವನ್ನು, ಕನ್ನಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವವರು, ನಮಗೆ ಈ ಬಗ್ಗೆ ಹೆಮ್ಮೆಯಿದೆ, ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅನಿವಾಸಿಗಳ ಗೋಳನ್ನು ಕೇಳುವವರು ಯಾರೂ ಇರಲಿಲ್ಲ, ಏಕೆಂದರೆ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರೇ ಇರಲಿಲ್ಲ! ಇನ್ನಾದರೂ ನೇಮಿಸಿ, ಇನ್ನಾದರೂ ಅನಿವಾಸಿಗಳ ಮನವಿಗೆ ಸ್ಪಂದಿಸಿ ಎಂದು ಕನ್ನಡ ಸಂಘ ಇಟಲಿ ಅಧ್ಯಕ್ಷ ಹೇಮೇಗೌಡ ಮನವಿ ಮಾಡಿಕೊಂಡಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿ ದುಡಿಯುವ ಅನಿವಾಸಿಗಳು ಶಾಶ್ವತ ಪೌರತ್ವ ಪಡೆಯಲು ಬಂದವರಲ್ಲ, ಅವರು ದುಡಿದ ಪ್ರತಿಯೊಂದು ರೂಪಾಯಿ ತಾಯ್ನಾಡಿಗೆ ಕಳುಹಿಸಿ ರಾಜ್ಯದ ಆರ್ಥಿಕತೆಗೆ ಸಹಾಯ ಮಾಡುವವರು, ಮುಖ್ಯಮಂತ್ರಿ ಯಡಿಯುರಪ್ಪನವರೇ, ಬಹಳಷ್ಟು ನಿರೀಕ್ಷೆಯೊಂದಿಗೆ ಅನಿವಾಸಿಗಳು ನಿಮ್ಮ ಮುಂದೆ ಬೇಡಿಕೆ ಇಡುತ್ತಿದ್ದೇವೆ, ನಮ್ಮ ಬೇಡಿಕೆಯನ್ನ ಕಡೆಗಣಿಸದಿರಿ ಎಂದು ಕತಾರ್ ತುಳು ಕೂಟದ ಪೋಷಕರು ಮತ್ತು ಮಾಜಿ ಅಧ್ಯಕ್ಷ ರವಿ ಶೆಟ್ಟಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *