ನವದೆಹಲಿ: ಸ್ನೇಹಿತನಿಗೆ ಮನಬಂದಂತೆ ಥಳಿಸಿ, ಆತನ ಮೇಲೆ ಕಾರ್ ಹರಿಸಿ ಕೊಲೆ ಮಾಡಲು ಯತ್ನಿಸಿದ ಮೂವರು ವಿದ್ಯಾರ್ಥಿಗಳನ್ನ ಗುರುವಾರದಂದು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಮುಖರ್ಜಿನಗರದಲ್ಲಿ ಮಾರ್ಚ್ 13ರಂದು ಈ ಘಟನೆ ನಡೆದಿದೆ. ಮೂವರು ವಿದ್ಯಾರ್ಥಿಗಳಾದ ದೀಪಕ್, ರಾಕೇಶ್ ಹಾಗೂ ಸೋನು ಸ್ನೇಹಿತ ಅರವಿಂದ್ ಕುಮಾರ್ ಮೇಲೆ ಮೂರು ಬಾರಿ ಕಾರ್ ಹರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅರವಿಂದ್ ದಾರಿಹೋಕರೊಬ್ಬರ ಸಹಾಯ ಕೇಳಿದ್ದು, ಅವರು ಯಾವುದೇ ಸಹಾಯ ಮಾಡಿರಲಿಲ್ಲ. ಬಳಿಕ ಸುತ್ತಮುತ್ತ ಜನ ಸೇರಿದ್ದು, ಅವರಲ್ಲೊಬ್ಬರು ಪೊಲೀಸ್ ಕಂಟ್ರೋಲ್ ರೂಮಿಗೆ ಮಾಹಿತಿ ನೀಡಿದ್ದರು.
ಸುಮಾರು ಅರ್ಧ ಗಂಟೆ ಕಾಲ ರಸ್ತೆಯಲ್ಲೇ ಬಿದ್ದಿದ್ದ ಅರವಿಂದ್‍ನನ್ನು ನಂತರ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಅರವಿಂದ್‍ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆಂದು ವರದಿಯಾಗಿದೆ.
ನಡೆದಿದ್ದೇನು?: ಮಾರ್ಚ್ 13ರಂದು ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಅರವಿಂದ್ ಹಾಗೂ ಸ್ನೇಹಿತರಾದ ದೀಪಕ್, ರಾಕೇಶ್ ಮತ್ತು ಸೋನು ಜಗಳ ಮಾಡಿಕೊಂಡಿದ್ದರು. ಮೂವರು ಆರೋಪಿಗಳಲ್ಲಿ ಒಬ್ಬ ಅರವಿಂದ್ ನಿಂದ ಹಣ ಪಡೆದಿದ್ದು, ಮಂಗಳವಾರದಂದು ಹಣ ವಾಪಸ್ ಕೊಡುವಂತೆ ಕೇಳಿದಾಗ ನಿರಾಕರಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದಿದ್ದು, ಆರೋಪಿಯೊಬ್ಬ ಅರವಿಂದ್ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದ. ಪರಿಣಾಮ ಅರವಿಂದ್ ಕುಸಿದು ಬಿದ್ದಿದ್ದ. ನಂತರ ಮೂವರು ಸೇರಿ ಅರವಿಂದ್‍ಗೆ ಥಳಿಸಿ ಆತನ ಮೇಲೆ ಕಾರ್ ಹರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆ ಕೇಳಿ ಸಾರ್ವಜನಿಕರು ಸ್ಥಳಕ್ಕೆ ಬಂದಾಗ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದರು. ಅದ್ಯ ಅವರನ್ನ ಬಂಧಿಸಲಾಗಿದೆ. ಘಟನೆಯಿಂದ ಅರವಿಂದ್‍ಗೆ ಮೂಳೆಗಳು ಮುರಿದಿದ್ದು, ಐಸಿಯು ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.