ಚಿಕ್ಕಬಳ್ಳಾಪುರ: ಟ್ರೆಕ್ಕಿಂಗ್ ಬಂದ ಮೂವರು ಯುವಕರು ಮಧ್ಯರಾತ್ರಿಯ ಕಗ್ಗತ್ತಲ್ಲಿ ಬೃಹದಾಕರದ ಬೆಟ್ಟ ಹತ್ತಿ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲಾಗದೇ ಫಜೀತಿ ಪಟ್ಟ ಘಟನೆ ಚಿಕ್ಕಬಳ್ಳಾಪುರ ದಿವ್ಯ ಗಿರಿಧಾಮದಲ್ಲಿ ನಡೆದಿದೆ.
ಬೆಂಗಳೂರು ಮೂಲದ ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಕರ್ ಕುಮಾರ್, ಐಷು ಹಾಗೂ ಖಾಸಗಿ ಕಂಪನಿಯ ಉದ್ಯೋಗಿ ದೀಪಾಂಶು ಟ್ರೆಕ್ಕಿಂಗ್‍ಗೆ ಆಗಮಿಸಿ ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯಿಂದಾಗಿ ಸುರಕ್ಷಿತವಾಗಿ ಇಳಿದಿದ್ದಾರೆ.
ನಡೆದಿದ್ದೇನು?
ಮೂವರು ಯುವಕರು ಪಡೆದು ಮಧ್ಯರಾತ್ರಿ ಕಾರಹಳ್ಳಿ ಕ್ರಾಸ್ ಮಾರ್ಗದ ಮುಖಾಂತರ ಕಡಿದಾದ ದಿವ್ಯಗಿರಿ ಬೆಟ್ಟದ ಅರ್ಧಭಾಗಕ್ಕೆ ತೆರಳಿದ್ದಾರೆ. ಆದರೆ ಬೆಳಕಾಗುತ್ತಿದಂತೆ ಬೆಟ್ಟದಿಂದ ಕೆಳಗಿಳಿಯಲು ಯತ್ನಿಸಿದ ವೇಳೆ ಅವರಿಗೆ ತಾವು ಆಗಮಿಸಿದ್ದ ಸ್ಥಳ ನೋಡಿ ಶಾಕ್ ಆಗಿದೆ. ಬೆಟ್ಟ ಹತ್ತಿ ಕಡಿದಾದ ಜಾಗದಲ್ಲಿ ಕೂತಿದ್ದ ಅವರಿಗೆ ಬೆಳಿಗ್ಗೆ ಇಳಿಯಲು ಹೆದರಿಕೆಯಾಗಿದೆ. ಏಕೆಂದರೆ ಬೆಟ್ಟದ ತೀರ ಕಡಿದಾದ ಜಾಗಕ್ಕೆ ತೆರಳಿದ್ದ ಯುವಕರು ಒಂದು ಹೆಜ್ಜೆ ಮುಂದಿಟ್ಟರೂ ಅಪಾಯ ಕಾದಿತ್ತು. ಅಪಾಯದ ತೀವ್ರತೆ ಅರಿತ ಯುವಕರು ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ. ಈ ಯುವಕರ ಕಿರುಚಾಟ ಕೇಳಿಸಿಕೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಜೊತೆಗೂಡಿ ಯುವಕರ ರಕ್ಷಣೆ ಮಾಡಿದ್ದಾರೆ.
ಮೂವರಲ್ಲಿ ದೀಪಾಂಶು ಚಾರಣದ ವೇಳೆ ಬಿದ್ದು ಗಾಯಗೊಂಡಿದ್ದು, ಮೊಣಕಾಲಿಗೆ ಗಂಭೀರವಾದ ಗಾಯವಾಗಿ ತೀವ್ರತರವಾದ ರಕ್ತಸ್ರಾವವಾಗಿದೆ. ಇದರಿಂದ ನಡೆಯಲು ಸಾಧ್ಯವಾಗದೇ ಸ್ಥಿತಿಗೆ ತಲುಪಿದ್ದ ಯುವಕನನ್ನು ಸಿಬ್ಬಂದಿ ಹೊತ್ತುಕೊಂಡು ರಕ್ಷಣೆ ಮಾಡಿದ್ದಾರೆ.
ಚಾರಣಿಗರ ಹಾಟ್ ಸ್ಪಾಟ್: ಪಂಚಗಿರಿಗಿಳ ನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಬೆಟ್ಟಗುಡ್ಡಗಳು ಇತ್ತೀಚೆಗೆ ಟ್ರೆಕ್ಕಿಂಗ್ ಪ್ರಿಯರ ಹಾಟ್ ಫೇವರಿಟ್ ತಾಣಗಳಾಗಿ ಮಾರ್ಪಾಡಾಗಿವೆ. ಬೆಂಗಳೂರು ನಗರದಿಂದ ಕೂಗಳತೆ ದೂರದ ನಂದಿಗಿರಿಧಾಮಕ್ಕೆ ಹೊಂದಿಕೊಂಡಿರುವ ಬ್ರಹ್ಮಗಿರಿ, ದಿವ್ಯಗಿರಿ, ಚನ್ನಗಿರಿ ಸೇರಿದಂತೆ ಸ್ಕಂದಗಿರಿಗಳು ಈಗ ಟ್ರೆಕ್ಕಿಂಗ್ ತಾಣಗಳಾಗಿ ಮಾರ್ಪಾಡಾಗಿವೆ. ಸರ್ಕಾರವೂ ಕೂಡ ಸ್ಕಂದಗಿರಿ ಬೆಟ್ಟಕ್ಕೆ ಅಧಿಕೃತವಾಗಿ ಚಾರಣ ಆರಂಭಿಸಿ ಹಣ ಕೂಡ ಗಳಿಸುತ್ತಿದೆ. ಆದರೆ ಸ್ಕಂದಗಿರಿ ಬಿಟ್ಟು ಬೇರೆ ಯಾವ ಬೆಟ್ಟದಲ್ಲೂ ಚಾರಣ ಮಾಡುವಂತಿಲ್ಲ. ಇದರ ನಡುವೆಯೂ ಈ ಮೂವರು ಯುವಕರು ದಿವ್ಯಗಿರಿ ಬೆಟ್ಟಕ್ಕೆ ಸಾಗಿ ಅಪಾಯ ಎದುರಿಸಿದ್ದಾರೆ.
ಸದ್ಯ ಗಾಯಾಳು ದೀಪಾಂಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅಕ್ರಮವಾಗಿ ಚಾರಣ ಕೈಗೊಂಡ ಹಿನ್ನಲೆ ನಂದಿಗಿರಿಧಾಮ ಪೊಲೀಸ್ ಠಾಣೆ ಸೇರಿದ್ದಾರೆ. ಹೀಗಾಗಿ ಚಾರಣ ಎಂದು ಬೆಟ್ಟಕ್ಕೆ ಹೋಗುವ ಮುನ್ನ ಒಮ್ಮೆ ಯೋಚಿಸಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv