– 30 ಗಂಟೆಗಳ ಕಾರ್ಯಾಚರಣೆ ಯಶಸ್ವಿ
ಪಾಟ್ನಾ: ಮನೆಯ ಬಳಿ ಆಟವಾಡುತ್ತಾ 110 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಿಸಿರುವ ಘಟನೆ ಬಿಹಾರ್ನ ಮುಂಗೇರಾ ಜಿಲ್ಲೆಯಲ್ಲಿ ನಡೆದಿದೆ.
ಮೂರು ವರ್ಷದ ಸನ್ನೊ ಮಂಗಳವಾರ ಸಂಜೆ 4 ಗಂಟೆ ವೇಳೆ ಮನೆಯ ಬಳಿ ಇದ್ದ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ವಿಷಯ ತಿಳಿದ ಪೋಷಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ರಾಷ್ಟ್ರಿಯ ವಿಪತ್ತು ನಿರ್ವಹಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿತ್ತು. ಸತತ 30 ಗಂಟೆಗಳ ಕಾರ್ಯಾಚರಣೆ ಬಳಿಕ ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.
Advertisement
#Bihar: 3-year-old girl who was stuck in a 110 feet deep borewell in Munger since yesterday has been rescued. (File pic) pic.twitter.com/YYxsZx9ky9
— ANI (@ANI) August 1, 2018
Advertisement
ಕೊಳವೆ ಬಾವಿಯಿಂದ ಸನ್ನೋಳನ್ನು ರಕ್ಷಿಸಿದ ಬಳಿಕ ತಜ್ಞ ವೈದ್ಯರು ಬಾಲಕಿಯ ಆರೋಗ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಕಿಯ ಆರೋಗ್ಯ ಉತ್ತಮವಾಗಿದ್ದು, ಬಳಿಕ ಸನ್ನೋಳನ್ನು ಪೋಷಕರ ವಶಕ್ಕೆ ನೀಡಿದ್ದಾರೆ.
Advertisement
ಕಾರ್ಯಾಚರಣೆ ವೇಳೆ ರಕ್ಷಣಾ ತಂಡ ಬಾಲಕಿ ಉಸಿರಾಟಕ್ಕೆ ಆಮ್ಲಜನಕವನ್ನು ಪೂರೈಸಿತ್ತು. ಅಲ್ಲದೇ ಬಾಲಕಿಯು ಇನ್ನೂ ಕೆಳಗೆ ಕುಸಿಯದಂತೆ ಮುಂಜಾಗ್ರತೆ ವಹಿಸಿದ್ದರು. ಬಳಿಕ ಕೊಳವೆಬಾವಿಯ ಪಕ್ಕದಲ್ಲಿ ಜೆಸಿಬಿ ಯಂತ್ರಗಳ ಸಹಾಯದಿಂದ ಬೃಹತ್ ಹೊಂಡ ನಿರ್ಮಿಸಿ ಬಾಲಕಿಯನ್ನು ಆದಷ್ಟು ಬೇಗ ರಕ್ಷಿಸುವ ಕಾರ್ಯ ನಡೆಸಿದ್ದರು.
Advertisement
ಬಾಲಕಿ ಮಂಗಳವಾರ ತನ್ನ ಪೋಷಕರೊಂದಿಗೆ ಮುಂಗೇರಾದ ಮುರ್ಗಿಚಕ್ ಎಂಬಲ್ಲಿರುವ ಅಜ್ಜನ ಮನೆಗೆ ಬಂದಿದ್ದಳು. ಈ ವೇಳೆ ಮನೆಯ ಹತ್ತಿರ ಆಟವಾಡುತ್ತಿರುವಾಗ ಕೊಳವೆ ಬಾವಿಗೆ ಬಿದ್ದಿದ್ದಳು. ಕೊಳವೆಬಾವಿಯಲ್ಲಿ ಬಾಲಕಿಯು ಅಳುತ್ತಿರುವ ಧ್ವನಿ ಕೇಳಿದ ಬಳಿಕ ಬಾಲಕಿ ಜೀವಂತವಾಗಿದ್ದು ಖಚಿತವಾಗಿತ್ತು. ಕೂಡಲೇ ಎಚ್ಚೆತ್ತ ರಕ್ಷಣಾ ಪಡೆಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದರು.