ಬೆಂಗಳೂರು: ನಗರದಲ್ಲಿ ಮ್ಯಾನ್‍ಹೋಲ್ ದುರಂತ ಸಂಭವಿಸಿದ್ದು, ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೂವರು ಕಾರ್ಮಿಕರು ದಾರುಣ ಸಾವನ್ನಪ್ಪಿದ್ದಾರೆ.
Advertisement
ಕಗ್ಗದಾಸಪುರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ದುರಂತದ ಬಳಿಕ ಎಚ್ಚೆತ್ತ ಜಲಮಂಡಳಿ, ಗುತ್ತಿಗೆದಾರ ಹಾಗೂ ಇಂಜಿನಿಯರ್ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಅಲ್ಲದೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Advertisement
Advertisement
ಮೇಯರ್ ಪದ್ಮಾವತಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಮೇಯರ್, ಜಲಮಂಡಳಿ ಕೆಲವೊಂದು ನಿರ್ದೇಶನಗಳನ್ನು ಪಾಲನೆ ಮಾಡುವಂತೆ ಸೂಚಿಸಿದೆ. ಆದ್ರೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಇನ್ಮುಂದೆ ಇಂಥ ದುರ್ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.
Advertisement
ನಡೆದಿದ್ದೇನು?: ನೀರಿನ ಸಂಪರ್ಕ ಸರಿಪಡಿಸಲು 15 ಅಡಿ ಆಳವಿದ್ದ ಮ್ಯಾನ್‍ಹೋಲ್‍ಗೆ ಇಬ್ಬರು ಕಾರ್ಮಿಕರು ಇಳಿದಿದ್ರು. ಈ ವೇಳೆ ಆಮ್ಲಜನಕದ ಕೊರತೆಯಿಂದ ಉಸಿರಾಟಕ್ಕೆ ತೊಂದರೆಯಾಗಿ ಕಿರುಚಾಡೋಕೆ ಶುರು ಮಾಡಿದ್ರು. ಆಗ ಟ್ರಾಕ್ಟರ್ ಡ್ರೈವರ್, ಕಾರ್ಮಿಕರನ್ನು ರಕ್ಷಿಸಲು ಮ್ಯಾನ್‍ಹೋಲ್‍ಗೆ ಇಳಿದು ಅವರೂ ಜೀವಬಿಟ್ಟಿದ್ದಾರೆ. ಸ್ಥಳೀಯರು ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ರೂ ಪ್ರಯೋಜನವಾಗ್ಲಿಲ್ಲ.
ಆಧುನಿಕ ಯಂತ್ರಪೋಕರಣ ಬಳಸಬೇಕೆಂಬ ನಿಯಮ ಇದ್ರೂ ಜಲಮಂಡಳಿ ಅಧಿಕಾರಿಗಳ ಹೊಣೆಗೇಡಿತನಕ್ಕೆ ಮುಗ್ಧ ಜೀವಗಳು ಬಲಿಯಾಗಿವೆ. ಕೆಲಸ ಮಾಡಲು ಬಂದಿದ್ದ ಕಾರ್ಮಿಕರಿಗೆ ಸೂಕ್ತ ರಕ್ಷಣಾ ಸಾಮಗ್ರಿಗಳನ್ನು ಒದಗಿಸದೇ ಇರುವುದು, 15 ಅಡಿ ಆಳದ ಮ್ಯಾನ್‍ಹೋಲ್‍ಗೆ ಇಳಿಯುವವರಿಗೆ ಆಮ್ಲಜನಕ ನೀಡದೇ ನಿರ್ಲಕ್ಷ್ಯ ವಹಿಸಿದ್ದೇ ಘಟನೆ ನಡೆಯಲು ಕಾರಣವಾಗಿದೆ. ಮೃತ ಕಾರ್ಮಿಕರು ಆಂಧ್ರ ಮೂಲದವರು ಎಂದು ಹೇಳಲಾಗಿದ್ದು, ಅವರ ಗುರುತಿನ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.
ಈ ಸಂಬಂಧ ಬೈಯಪ್ಪನಳ್ಳಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಾಗಿದೆ.