ಕೆಜಿಎಫ್, ಕಾಂತಾರ (Kantara) ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ಫಿಲ್ಮಸ್ (Hombale Films) ಮುಂದಿನ ಐದು ವರ್ಷಗಳಲ್ಲಿ ಬರೋಬ್ಬರಿ ಮೂರು ಸಾವಿರ ಕೋಟಿ ಬಂಡವಾಳವನ್ನು ಚಿತ್ರರಂಗದಲ್ಲಿ ಹೂಡಲಿದೆ ಎಂದು ಈ ಹಿಂದೆಯೇ ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿಯನ್ನು ಬ್ರೇಕ್ ಮಾಡಿತ್ತು. ಇದೀಗ ಸ್ವತಃ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur) ಅವರೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಬಿಗ್ ನ್ಯೂಸ್ ನೀಡಿದ್ದಾರೆ.
ಒಂದು ಮೂಲದ ಪ್ರಕಾರ ಈಗಾಗಲೇ ಅವರು ಸಾವಿರ ಕೋಟಿಯಷ್ಟು ಹಣವನ್ನು ಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಅವರು ಬಾಲಿವುಡ್ ಚಿತ್ರರಂಗಕ್ಕೂ ಎಂಟ್ರಿ ಕೊಡಲಿದ್ದಾರೆ. ಈಗಾಗಲೇ ಶಾರುಖ್ ಖಾನ್ ಸಿನಿಮಾ ಮಾಡುವ ಕುರಿತು ಮಾತುಕತೆ ಕೂಡ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ಕನ್ನಡ ನಿರ್ಮಾಣ ಸಂಸ್ಥೆಯೊಂದು ಸಿನಿಮಾ ರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದ ಹಣವನ್ನು ಹೂಡಿಕೆ ಮಾಡುತ್ತಿದೆ. ಅಲ್ಲದೇ, ಭಾರತೀಯ ಬಹುತೇಕ ಭಾಷೆಯ ಚಿತ್ರಗಳಲ್ಲಿ ಸಿನಿಮಾ ಮಾಡುವ ಗುರಿ ಹೊಂದಲಾಗಿದೆ. ಇದರ ಭಾಗವಾಗಿಯೇ ದಕ್ಷಿಣದ ಅಷ್ಟೂ ಭಾಷೆಗಳಲ್ಲಿ ಈಗಾಗಲೇ ಚಿತ್ರ ನಿರ್ಮಾಣವನ್ನು ಮಾಡಲಾಗುತ್ತಿದೆ. ಸದ್ಯದಲ್ಲೇ ಬಾಲಿವುಡ್ ನಲ್ಲೂ ಸಿನಿಮಾ ಮಾಡುವ ಯೋಜನೆಯೊಂದು ಬಹಿರಂಗಗೊಳ್ಳಲಿದೆ.