ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅಖ್ನೂರ್‌ನಲ್ಲಿ ಭಯೋತ್ಪಾದಕರು ಸೇನಾ ವಾಹನದ (Army Vehicle) ಮೇಲೆ ಗುಂಡು ಹಾರಿಸಿದ ಬಳಿಕ ನಡೆದ ನೇನೆಯ (Indian Army) ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಕಾರ್ಯಾಚರಣೆ ನಡೆದ ಪ್ರದೇಶದಲ್ಲಿ ಭದ್ರತಾ ಪಡೆಗಳು ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ. ಅಲ್ಲದೇ ಎನ್‌ಕೌಂಟರ್ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.
ಬಟಾಲ್ ಪ್ರದೇಶದಲ್ಲಿ ಬೆಳಗ್ಗೆ 6-7 ಗಂಟೆ ಸುಮಾರಿಗೆ ಮೂವರು ಭಯೋತ್ಪಾದಕರು ಸೇನಾ ವಾಹನದ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದರು. ಬಳಿಕ ಭದ್ರತಾ ಪಡೆಗಳು ತಕ್ಷಣವೇ ಈ ಪ್ರದೇಶವನ್ನು ಸುತ್ತುವರಿದು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದವು.
ಜಮ್ಮು ಮತ್ತು ಕಾಶ್ಮೀರದಲ್ಲಿ ದೀಪಾವಳಿ ಹಬ್ಬದ ಸಲುವಾಗಿ ಭದ್ರತಾ ಕ್ರಮಗಳನ್ನು ಸೇನೆ ಜಾರಿಗೆ ತಂದಿದೆ. ಅದರ ನಡುವೆಯೇ ಈ ದಾಳಿ ನಡೆದಿದೆ. ಇತ್ತೀಚೆಗೆ ಗಂದರ್‌ಬಾಲ್ ಮತ್ತು ಬಾರಾಮುಲ್ಲಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜಮ್ಮು, ಕಥುವಾ, ಸಾಂಬಾ, ಪೂಂಚ್ ಮತ್ತು ರಜೌರಿ ಸೇರಿದಂತೆ ಜಮ್ಮುವಿನ ಗಡಿ ಜಿಲ್ಲೆಗಳಿಗೆ ಈ ಹಿಂದೆ ಹೈ ಅಲರ್ಟ್ ಘೋಷಿಸಲಾಗಿತ್ತು.
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಕಣಿವೆಯಲ್ಲಿ ನಡೆದ ಗುಂಡಿನ ಚಕಮಕಿಗಳಲ್ಲಿ ಇಬ್ಬರು ಸೈನಿಕರು ಸೇರಿದಂತೆ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.