ಕೊಪ್ಪಳ: ಜಿಲ್ಲೆಯ ಸಣಾಪೂರ ಬಳಿ ನಡೆದಿದ್ದ ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಓರ್ವನ ಹತ್ಯೆ ಕೇಸ್‌ನಲ್ಲಿ ಅಪರಾಧ ಸಾಬೀತಾದ ಹಿನ್ನೆಲೆ ಗಂಗಾವತಿಯ (Gangavathi) ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ ಗಂಗಾವತಿ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಮಲ್ಲೇಶ್ @ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪನನ್ನು ಅಪರಾಧಿಗಳು ಎಂದು ಘೋಷಿಸಿ, ಫೆ.16ರಂದು ಅಂತಿಮ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಇಂದು ಮೂವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಪ್ರಕರಣ ನಡೆದು 11 ತಿಂಗಳಲ್ಲಿ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ. ಇದನ್ನೂ ಓದಿ: ಇಸ್ರೇಲ್ ಮಹಿಳೆ ಸೇರಿ ಇಬ್ಬರ ಮೇಲೆ ಅತ್ಯಾಚಾರ, ಓರ್ವನ ಹತ್ಯೆ ಕೇಸ್ – ಮೂವರ ಅಪರಾಧ ಸಾಬೀತು
ಏನಿದು ಪ್ರಕರಣ?
ಆನೆಗೊಂದಿಯ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದ 5 ಜನ ಪ್ರವಾಸಿಗರು ಮಾ.6 ರಂದು ರಾತ್ರಿ ಊಟ ಮುಗಿಸಿಕೊಂಡು ಸುತ್ತಾಡಲು ತೆರಳಿದ್ದರು. ಸಣಾಪೂರ ಕೆರೆಯ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಯ ಬಳಿ ಹೋಗಿ ಸಂಗೀತ ಆಲಿಸುತ್ತಾ ಕುಳಿತಾಗ ಮೂವರು ದುಷ್ಕರ್ಮಿಗಳು ಹಣ ಕಳ್ಳತನ ಮಾಡುವ ಉದ್ದೇಶದಿಂದ ಬಂದು ಗಲಾಟೆ ನಡೆಸಿದ್ದರು.
ಮದ್ಯದ ಅಮಲಿನಲ್ಲಿದ್ದ ದುಷ್ಕರ್ಮಿಗಳು, ಮೂವರು ಪುರುಷರ ಮೇಲೆ ಹಲ್ಲೆಯನ್ನು ನಡೆಸಿ ಕೆರೆಗೆ ತಳ್ಳಿದ್ದರು. ಇನ್ನೂ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಕೆರೆಗೆ ಬಿದ್ದ ಮೂವರ ಪೈಕಿ ಇಬ್ಬರು ದಡಕ್ಕೆ ಸೇರಿದ್ದು, ಇನ್ನೋರ್ವನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ದಡಕ್ಕೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮೃತದೇಹ 24 ಗಂಟೆಗಳ ನಂತರ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲಾಗಿತ್ತು.
ಅತ್ಯಾಚಾರಕ್ಕೊಳಗಾದವರನ್ನು ಓರ್ವ ಇಸ್ರೇಲ್ ಮಹಿಳೆ ಹಾಗೂ ಒಬ್ಬಳು ಭಾರತದ ಮಹಿಳೆ ಎಂದು ತಿಳಿದು ಬಂದಿತ್ತು. ಕೊಲೆಯಾಗಿರುವ ಪ್ರವಾಸಿಯನ್ನು ಓರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿತ್ತು. ಇನ್ನೂ ಇದೇ ವೇಳೆ ಜರ್ಮನ್ ದೇಶದ ಡೇನೈಲ್ ಹಾಗೂ ಮಹಾರಾಷ್ಟ್ರ ಮೂಲದ ಪಂಕಜ್ ಎನ್ನುವವರು ಗಾಯಗೊಂಡಿದ್ದರು.ಇದನ್ನೂ ಓದಿ: ರಾಜ್ಯಾದ್ಯಂತ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ – ಹೆಚ್ಚಿದ ಆತಂಕ, ಪೊಲೀಸರಿಂದ ತೀವ್ರ ಶೋಧ

