ಮಂಗಳೂರು: ಬ್ಯಾಂಕ್ ಕಚೇರಿ ಒಳಗೆ ಮಲಗಿದ್ದಲ್ಲೇ ಮೂವರು ಕಾವಲು ಸಿಬ್ಬಂದಿ ಹೆಣವಾದ ಘಟನೆ ಮಂಗಳೂರಿನ ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಶಾಖಾ ಕಚೇರಿಯಲ್ಲಿ ನಡೆದಿದೆ.
ತಲಪಾಡಿ ಬಳಿಯ ಕೆ.ಸಿ ರೋಡಿನಲ್ಲಿರುವ ಕಚೇರಿ ಕಟ್ಟಡದಲ್ಲಿ ಮೂವರು ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಉಮೇಶ್(60), ಸಂತೋಷ್(37) ಹಾಗೂ ಸೋಮನಾಥ್(55) ಮಲಗಿದ್ದಲ್ಲೇ ಹೆಣವಾದ ದುರ್ದೈವಿಗಳು.
ಜನರೇಟರ್ ರಾಸಾಯನಿಕ ಸೋರಿಕೆಯಿಂದ ಸಿಬ್ಬಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಿಟಕಿ ಬಾಗಿಲು ಮುಚ್ಚಿ ಮಲಗಿದ್ದ ಮೂವರು ಸೆಕ್ಯೂರಿಟಿ ಗಾರ್ಡ್‍ಗಳು ಮಳೆಗೆ ಕರೆಂಟ್ ಇಲ್ಲದ್ದರಿಂದ ಜನರೇಟರ್ ಸ್ಟಾರ್ಟ್ ಮಾಡಿ ಮಲಗಿದ್ದರು. ಇಂದು ಬೆಳಗ್ಗೆ ಹತ್ತು ಗಂಟೆಗೆ ಬ್ಯಾಂಕ್ ಸಿಬ್ಬಂದಿ ಆಗಮಿಸಿದಾಗ ಸೆಕ್ಯೂರಿಟಿ ಗಾರ್ಡ್‍ಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೃತ ಉಮೇಶ್ ಅಯ್ಯಪ್ಪ ಮಾಲಾಧಾರಿಯಾಗಿದ್ದರು.
ಘಟನೆಗೆ ಸಂಬಂಧಿಸಿದಂತೆ ಕೋಟೆಕಾರು ಸೊಸೈಟಿಗೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಜೂನ್ 23ರಂದು ಶಾಖೆಯಲ್ಲಿ ಚಿನ್ನಾಭರಣ ದರೋಡೆಯ ವಿಫಲ ಯತ್ನ ನಡೆದಿತ್ತು ಎಂದು ತಿಳಿದುಬಂದಿದೆ.