ಹಾಸನ: ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿರುವ ಘಟನೆ ಹಾಸನದ ಶಂಕರನಹಳ್ಳಿ ಬಳಿ ನಡೆದಿದೆ.
ಗೋಪನಹಳ್ಳಿ ಗ್ರಾಮದ ರವಿ(56), ಪ್ರಸಾದ್(23), ಕಿಟ್ಟಿ(59) ಮೃತ ದುರ್ದೈವಿಗಳು. ಈ ಮೂವರು ದ್ವಿಚಕ್ರ ವಾಹನದಲ್ಲಿ ತೆರಳುತಿದ್ದ ವೇಳೆ
ಗಾಳಿಗೆ ಕೆಳಗೆ ಬಿದ್ದಿದ್ದ ವಿದ್ಯತ್ ತಂತಿ ತಗುಲಿ ಸಾವನ್ನಪ್ಪಿದ್ದಾರೆ. ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಘಟನೆ ಹಿನ್ನೆಲೆಯಲ್ಲಿ ಸೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಸ್ಥಳೀಯರ ಪಟ್ಟು ಹಿಡಿದಿದ್ದಾರೆ. ಅಧಿಕಾರಿಗಳು ಬರುವವರೆಗೂ ಮೃತರ ಶವಗಳನ್ನ ಸ್ಥಳದಿಂದ ಎತ್ತದಿರಲು ನಿರ್ಧಾರ ಮಾಡಿದ್ದು, ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಭಾರಿ ಬಿರುಗಾಳಿ ಮಳೆ ಹಿನ್ನಲೆಯಲ್ಲಿ ಚಲಿಸುತ್ತಿದ್ದ ಕಾರ್ ಮೇಲೆ ವಿದ್ಯುತ್ ಕಂಬ ಬಿದ್ದಿರುವ ಘಟನೆ ಆನೆಪಾಳ್ಯ ಮುಖ್ಯ ರಸ್ತೆಯ ಎರಡನೇ ಕ್ರಾಸ್ ನಲ್ಲಿ ನಡೆದಿದೆ. ಮಿಲಿಟರಿ ಕಾಂಪೌಂಡ್ ಒಳಗಿದ್ದ ಬೃಹತ್ ಮರವೊಂದು ಕಾಂಪೌಂಡ್ ಪಕ್ಕದಲ್ಲಿದ್ದ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದ ಪರಿಣಾಮ ಅದೇ ರಸ್ತೆಯ ಸಾಲಿನಲ್ಲಿದ್ದ ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿದಿದ್ದು, ಕಾರುಗಳು ಜಖಂಗೊಂಡಿವೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಕಾರ್ ನಲ್ಲಿ ಡ್ರೈವರ್ ಜೊತೆಗೆ ಮೂವರು ಆಕ್ಸೆಂಚರ್ ಕಂಪೆನಿಯ ನೌಕರರು ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಪರಿಣಾಮ ಒಂದು ಇಟಿಯೋಸ್ ಮತ್ತು ಹುಂಡೈ ಗೆಟ್ಜ್ ಕಾರು ಜಖಂಗೊಂಡಿದೆ.