ಬಾಲ್ಯ ವಿವಾಹದ ಎಫೆಕ್ಟ್ – ಮೂವರು ಅಪ್ರಾಪ್ತೆಯರು ಗರ್ಭಿಣಿಯರು

Public TV
2 Min Read
rmg child marriage f

ರಾಮನಗರ: ರಾಜ್ಯ ಸರ್ಕಾರ ಬಾಲ್ಯ ವಿವಾಹಗಳನ್ನು ತಡೆಯಬೇಕೆಂದು ಹಲವು ರೀತಿಯಲ್ಲಿ ಯೋಜನೆಗಳನ್ನು ಕೈಗೊಂಡಿದೆ. ಆದರೆ ಚನ್ನಪಟ್ಟಣ ತಾಲೂಕಿನ ಇರುಳಿಗರ ಕಾಲೋನಿಯಲ್ಲಿ ಯಾವ ಕಾನೂನುಗಳು ಬಾಲ್ಯ ವಿವಾಹಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ. ಈ ಗ್ರಾಮದ ಮಕ್ಕಳು ಬಾಲ್ಯದಲ್ಲೇ ಮದುವೆಯಾಗಿ ಗರ್ಭಿಣಿಯಾಗ್ತಿದ್ದು, ಹುಟ್ಟುವ ಮಕ್ಕಳು ಕೂಡ ಅಪೌಷ್ಟಿಕತೆಯಿಂದಾಗಿ ಬಳಲಿ ಅನಾರೋಗ್ಯಕ್ಕೆ ತುತ್ತಾಗುತಿದ್ರು ಜನರಲ್ಲಿ ಅರಿವು ಮಾತ್ರ ಮೂಡಿಲ್ಲ.

ಈ ಗ್ರಾಮದಲ್ಲಿ 50 ಕುಟುಂಬಗಳು ವಾಸವಾಗಿದ್ದು, ಒಟ್ಟು ಜನಸಂಖ್ಯೆ 381 ಆಗಿದ್ರೆ, ಇದರಲ್ಲಿ 120 ಮಕ್ಕಳೇ ಇದ್ದಾರೆ. 6 ವರ್ಷದೊಳಗಿನ ಮಕ್ಕಳು 42 ಜನ, 1 ರಿಂದ 5ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 45 ಜನ, 6 ರಿಂದ 10ನೇ ತರಗತಿ ವ್ಯಾಸಂಗ ಮಾಡುವ ಮಕ್ಕಳು 35 ಜನ ಸದ್ಯ ಈ ಗ್ರಾಮದಲ್ಲಿದ್ದಾರೆ. ಆದರೆ ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದಲೂ ಕೂಡ ಬಾಲ್ಯ ವಿವಾಹ ಎಂಬ ಪಿಡುಗು ಎಗ್ಗಿಲ್ಲದೇ ನಡೆದುಕೊಂಡು ಬಂದಿದೆ.

rmg child marriage 2

ಕಳೆದ 3 ತಿಂಗಳ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 3 ಜನ ಹೆಣ್ಣುಮಕ್ಕಳು ಗರ್ಭಿಣಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿದ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಸಂಬಂಧಪಟ್ಟ ಕುಟುಂಬಸ್ಥರಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಿದ್ದಾರೆ.

ನಾಲ್ಕು ತಿಂಗಳ ಹಿಂದೆ ಗ್ರಾಮದಲ್ಲಿ ನಾಲ್ವರ ಬಾಲ್ಯ ವಿವಾಹ ನಡೆದಿದ್ದು, ಮೂವರು ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸೂಚನೆ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧಿಕಾರಿಗಳು ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆಯರು ಗರ್ಭಿಣಿಯರಾಗಿರುವ ವಿಚಾರವಾಗಿ ಪೋಕ್ಸೋ ಅಡಿಯಲ್ಲಿ ದೂರು ದಾಖಲಾಗಿದ್ರೆ, ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿದ್ದಕ್ಕೆ ಹೆದರಿ ಓರ್ವ ಅಪ್ರಾಪ್ತೆ ಗರ್ಭಿಣಿ ಹಾಗೂ ಆಕೆಯ ಪತಿ ಇಬ್ಬರೂ ಕೂಡ ನಾಪತ್ತೆಯಾಗಿದ್ದಾರೆ.

rmg child marriage

ಈ ಗ್ರಾಮದಲ್ಲಿನ ಜನ ಸರ್ಕಾರದ ಯೋಜನೆಗಳಾದ ಮಾತೃಶ್ರೀ ಯೋಜನೆ, ತಾಯಿ ಕಾರ್ಡ್, ಭಾಗ್ಯಲಕ್ಷ್ಮಿ ಬಾಂಡ್ ಸೇರಿದಂತೆ ಆಧಾರ್ ಕಾರ್ಡ್, ಪಡಿತರ ಯಾವುದೊಂದು ಸೌಲಭ್ಯಗಳನ್ನು ಸಹ ಬಹುತೇಕ ಮಂದಿ ಪಡೆದುಕೊಂಡಿಲ್ಲ. ಈ ಯೋಜನೆಗಳ ಪಲಾನುಭವಿಗಳಾದ್ರೆ ಬಾಲ್ಯ ವಿವಾಹ ಹೊರ ಬೀಳುತ್ತೆ ಅಂತಲೇ ದೂರ ಉಳಿದಿದ್ದಾರೆ ಎನ್ನಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಡಳಿತ ಬಾಲ್ಯ ವಿವಾಹ ತಡೆಗೆ ಮುಂದಾಗಿದ್ದು ಇರುಳಿಗರ ಕಾಲೋನಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ. ಅಲ್ಲದೇ ಜನರಲ್ಲಿ ಮೂಢನಂಬಿಕೆಯನ್ನು ಹೊರ ಹಾಕಿ ಉತ್ತಮ ಜೀವನ ನಡೆಸಲು ಅಗತ್ಯ ರೀತಿಯ ಅರಿವು ಹಾಗೂ ಮನಪರಿವರ್ತನೆಗೆ ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *