ಚಿಕ್ಕಮಗಳೂರು: ಒಬ್ಬರ ಕೈಗೆ ಒಬ್ಬರು ವೇಲ್ ಬಿಗಿದುಕೊಂಡು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಕೆಳಪೇಟೆ ನಿವಾಸಿಗಳಾದ ಸುಬ್ಬಮ್ಮ, ಶಶಿಕಲಾ, ಉಮೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಮೇಶ್ ಹಾಗೂ ಶಶಿಕಲಾ ದಂಪತಿಯಾಗಿದ್ದು, ಸುಬ್ಬಮ್ಮ ಶಶಿಕಲಾಳ ತಾಯಿಯಾಗಿದ್ದಾರೆ.
ದಂಪತಿಯ 2 ವರ್ಷದ ಮಗಳು ಅಮೂಲ್ಯಳಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದಿದ್ರಿಂದ ಹಾರ್ಟ್ ಆಪರೇಷನ್ ಮಾಡಿಸಿದ್ರು. ಹೀಗಿದ್ದರೂ ಮಗು ಬದುಕದೇ ಯುಗಾದಿ ಹಬ್ಬದಂದು ಸಾವನ್ನಪ್ಪಿತ್ತು. ಇದರಿಂದ ಮನನೊಂದ ಮನೆಯವರು, ಕುಟುಂಬದಲ್ಲಿ ನಾವ್ಯಾರು ಬದುಕಬಾರದೆಂದು ಎಲ್ಲರೂ ಕೈಗೆ ವೇಲ್ ಕಟ್ಟಿಕೊಂಡು ಇಂದು ತುಂಗಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನದಿಯಿಂದ ಒಮ್ಮೆಲೆ ಮೂರು ಮೃತದೇಹಗಳನ್ನು ಹೊರತೆಗೆಯುವಾಗ ಸ್ಥಳೀಯರು ಕಣ್ಣಾಲಿಗಳು ತೇವಗೊಂಡು, ನಮ್ಮ ಶತ್ರುಗಳಿಗೂ ಈ ಸ್ಥಿತಿ ಬರಬಾರದೆಂದು ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.