LatestMain PostNational

ಸೊಪೋರ್‌ನಲ್ಲಿ ಮೂವರು ಲಷ್ಕರ್ ಉಗ್ರರು ಅರೆಸ್ಟ್

ಶ್ರೀನಗರ: ಉತ್ತರ ಕಾಶ್ಮೀರದ ಸೊಪೋರ್‌ನಲ್ಲಿ ಲಷ್ಕರ್-ಇ-ತೊಯ್ಬಾ (ಎಲ್‍ಇಟಿ) ಸಂಘಟನೆಗೆ ಸೇರಿದ ಮೂವರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಪೊಲೀಸರು ಇತ್ತೀಚೆಗೆ ಸ್ಥಳೀಯರಲ್ಲದ ಕಾರ್ಮಿಕರ ಹತ್ಯೆಗಳು ಮತ್ತು ಅನೇಕ ಸ್ಥಳಗಳಲ್ಲಿ ಗ್ರೆನೇಡ್ ದಾಳಿಗಳ ಬಗ್ಗೆ ತನಿಖೆ ನಡೆಸಿದ್ದರು. ಈ ವೇಳೆ ವಿವಿಧ ಸ್ಥಳಗಳಿಂದ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಶಂಕಿತ ವ್ಯಕ್ತಿಗಳ ನಿರಂತರ ವಿಚಾರಣೆಯಿಂದ ಈ ಎಲ್ಲಾ ಹತ್ಯೆಗಳ ಹಿಂದೆ ಎಲ್‍ಇಟಿ ಸಂಘಟನೆಯ ಕೈವಾಡವಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತಿಯ ಕಿರುಕುಳ ತಾಳಲಾರದೇ ಪತ್ನಿ ನೇಣಿಗೆ ಶರಣು

ಮೇ 2 ರಂದು ಹೈಗಮ್‍ನಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದರು. ಭದ್ರತಾ ಪಡೆಗಳು ಅವರನ್ನು ವಿಚಾರಣೆ ನಡೆಸಲು ಮುಂದಾದಾಗ ಅವರು ತೋಟದ ನಿರ್ಜನ ಪ್ರದೇಶಗಳಿಗೆ ಓಡಿ ಪರಾರಿಯಾಗಿದ್ದರು.

ಈ ವೇಳೆ ಎಂವಿಸಿಪಿ (ಮೊಬೈಲ್ ವೆಹಿಕಲ್ ಚೆಕ್ ಪೋಸ್ಟ್) ಮೂವರು ವ್ಯಕ್ತಿಗಳನ್ನು ಬೆನ್ನಟ್ಟಿತ್ತು. ಪರಾರಿಯಾದ ಮೂವರು ಆ ಸ್ಥಳವನ್ನು ಬಿಟ್ಟು ತೆರಳದಂತೆ ಸೈನಿಕರು ನಿಗಾ ವಹಿಸಿದ್ದರು. ಅಂತಿಮವಾಗಿ ಭದ್ರತಾ ಪಡೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಉಸ್ಮಾನ್-ಬಾದ್ ವಾರ್ಪೋರಾದ ತಫ್ಹೀಮ್ ರೆಯಾಜ್, ಬ್ರತ್ ಕಲಾನ್ ಸೋಪೋರ್‌ನ ಸೀರತ್ ಶಾಬಾಜ್ ಮಿರ್ ಮತ್ತು ಮಿರ್ಪೋರಾ ಬ್ರತ್‍ಕಲನ್‍ನ ರಮೀಜ್ ಅಹ್ಮದ್ ಖಾನ್ ಬಂಧಿತ ಉಗ್ರರು.

ಬಂಧಿತ ಉಗ್ರರಿಂದ ಮೂರು ಚೀನೀ ಪಿಸ್ತೂಲ್‍ಗಳು, ಮದ್ದುಗುಂಡುಗಳು ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ರಂಜಾನ್ ಮುನ್ನಾ ದಿನವೇ ಎರಡು ಗುಂಪುಗಳ ಮಧ್ಯೆ ಗಲಾಟೆ – ಇಂಟರ್ನೆಟ್ ಸ್ಥಗಿತ

ಇದರ ಮಧ್ಯೆ, ಗಂದರ್‍ಬಾಲ್‍ನಲ್ಲಿ ಸ್ಕಾರ್ಪಿಯೋ ಕಾರಿನಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಒಬ್ಬ ಲಷ್ಕರ್ ಇ ತೊಯ್ಬಾ ಉಗ್ರಗಾಮಿ ಸಹಚರನನ್ನು ಸಹ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

Leave a Reply

Your email address will not be published.

Back to top button