ಇಂದೋರ್: ಪಾದಚಾರಿಗಳು ಮತ್ತು ವಾಹನಗಳಿಗೆ ಟ್ರಕ್ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.
ಎಣ್ಣೆ ಮತ್ತಲ್ಲಿ ಚಾಲಕ ಟ್ರಕ್ ಚಲಾಯಿಸಿದ್ದರಿಂದ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ದೇಹಗಳು ಛಿದ್ರವಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಅನೇಕರು ಗಂಭೀರ ಸ್ಥಿತಿಯಲ್ಲಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ವಿಮಾನ ನಿಲ್ದಾಣ ರಸ್ತೆಯ ಶಿಕ್ಷಕ್ ನಗರದಲ್ಲಿ ನಿಯಂತ್ರಣ ತಪ್ಪಿದ ಟ್ರಕ್ ನಿರ್ಬಂಧಿತ ಪ್ರದೇಶವನ್ನು ಪ್ರವೇಶಿಸಿ ಜನರ ಗುಂಪು ಹಾಗೂ 10 ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚಾಲಕ ವಿಪರೀತ ಮದ್ಯ ಸೇವಿಸಿದ್ದ. ಮೊದಲು ರಾಮಚಂದ್ರ ನಗರ ಡಿವೈಡರ್‌ನಲ್ಲಿ ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಬಡಾ ಗಣಪತಿ ಪ್ರದೇಶದ ಕಡೆಗೆ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಾನೆ. ಚಾಲಕನನ್ನು ಹಿಡಿದು ಮಲ್ಹರ್‌ಗಂಜ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಕೃಷ್ಣ ಲಾಲ್‌ಚಂದಾನಿ ತಿಳಿಸಿದ್ದಾರೆ.
ಕೋಪಗೊಂಡ ಸ್ಥಳೀಯರು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಆದರೆ, ಅಪಘಾತವಾದ ಬೈಕ್ ಟ್ರಕ್‌ನ ಕೆಳಗೆ ಸಿಲುಕಿಕೊಂಡು, ಘರ್ಷಣೆಯಿಂದಾಗಿ ಬೈಕ್‌ನ ಇಂಧನ ಟ್ಯಾಂಕ್ ಸ್ಫೋಟಗೊಂಡು ಟ್ರಕ್ ಹೊತ್ತಿ ಉರಿಯಿತು ಎಂದು ಸ್ಥಳೀಯರು ಆರೋಪಿಸಿದ್ದಾರೆ.

