ಲಕ್ನೋ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದ ಆರೋಪದಡಿ ಕಾಶ್ಮೀರದ ಮೂವರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶ ಆಗ್ರಾದಲ್ಲಿ ಬುಧವಾರ ಪೊಲೀಸರು ಬಂಧಿಸಿದ್ದಾರೆ.
ಕ್ರಿಕೆಟ್‍ನಲ್ಲಿ ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ದೇಶದ್ರೋಹ ಪ್ರಕರಣ ದಾಖಲಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದಾರೆ.
ಅರ್ಷದ್ ಯೂಸಫ್, ಇನಾಯತ್ ಅಲ್ತಾಫ್ ಶೇಖ್, ಶೌಕತ್ ಅಹ್ಮದ್ ಗನಾಯ್ ಬಂಧಿತರು. ಮೂವರು ಸಹ ರಾಜ ಬಲವಂತ್ ಸಿಂಗ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನಲಾಗಿದೆ. ಇದನ್ನೂ ಓದಿ: ಟಿ-20 ವಿಶ್ವಕಪ್‍ನಲ್ಲಿ ಪಾಕ್ ಗೆಲುವು ಆಚರಿಸೋರು ದೇಶದ್ರೋಹ ಆರೋಪ ಎದುರಿಸ್ಬೇಕಾಗಿರುತ್ತೆ: ಯೋಗಿ ಆದಿತ್ಯನಾಥ್
ಧರ್ಮದ ಹೆಸರಿನಲ್ಲಿ ಗುಂಪುಗಳ ನಡುವೆ ವೈರತ್ವ ಪ್ರಚೋದಿಸಿದ ಆರೋಪದ ಮೇಲೆ ಮೂವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ದೇಶದ್ರೋಹ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಖಾತೆ ಟ್ವೀಟ್ ಮಾಡಿದೆ.
ಭಾರತ-ಪಾಕಿಸ್ತಾನ ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನ ಪರವಾಗಿ ಪೋಸ್ಟ್‍ಗಳನ್ನು ಹಾಕಿ ಅಶಿಸ್ತು ಪ್ರದರ್ಶಿಸಿದ್ದಾರೆಂದು ಆರೋಪಿಸಿ ಮೂವರನ್ನು ಸೋಮವಾರವೇ ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿತ್ತು. ಇದನ್ನೂ ಓದಿ: ದೆಹಲಿ ವಿವಿಯ ನಿವೃತ್ತ ಪ್ರಾಧ್ಯಾಪಕ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ!
ಪಂದ್ಯದ ನಂತರ ಇವರ ವಿರುದ್ಧ ದೇಶದ್ರೋಹ ಆರೋಪ ಕೇಳಿಬಂದಿತ್ತು. ದೂರು ಆಧರಿಸಿ ಎಫ್‍ಐಆರ್ ದಾಖಲಿಸಿದ್ದೇವೆ. ತನಿಖೆ ನಂತರ ಅವರನ್ನು ಬಂಧಿಸಲಾಗಿದೆ ಎಂದು ಆಗ್ರಾ ನಗರದ ಎಸ್‍ಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ವಿದ್ಯಾರ್ಥಿಗಳನ್ನು ಜಗದೀಶಪುರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.