ಕೊಪ್ಪಳ: ಇಲ್ಲಿನ ವಿದ್ಯಾರ್ಥಿನಿ ಮಲ್ಲಮ್ಮ ಶೌಚಾಲಯ ಕಟ್ಟಿಸಿಕೊಡುವಂತೆ ಉಪವಾಸ ಕುಳಿತು ಇಡೀ ದೇಶದ ಗಮನ ಸೆಳೆದಿದ್ದಳು. ಅಷ್ಟೆ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಕೂಡ ಮನ್ ಕಿ ಬಾತ್‍ನಲ್ಲಿ ಮಲ್ಲಮ್ಮಳ ಕುರಿತು ಗುಣಗಾನ ಮಾಡಿದ್ರು. ಈಗ ಕೊಪ್ಪಳದ ಶೌಚಾಲಯ ಕ್ರಾಂತಿಯಲ್ಲಿ ಮೂವರು ವಿದ್ಯಾರ್ಥಿನಿಯರು ಮತ್ತೆ ಗಮನಸೆಳೆಯುತ್ತಿದ್ದಾರೆ.
ಕಾಮನೂರು ಗ್ರಾಮದ ಸಂಗೀತಾ, ವಿದ್ಯಾ, ಅಕ್ಷತಾ ಎಂಬ ವಿದ್ಯಾರ್ಥಿನಿಯರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು, ಚೊಂಬು ಹಿಡಿದು ಬಯಲಿಗೆ ಹೋಗೋದು ಅಸಹ್ಯ. ಹೀಗಾಗಿ ಮನೆಯಲ್ಲಿ ಶೌಚಾಲಯ ಕಟ್ಟಿಸುವ ತನಕ ಉಪವಾಸ ಇರ್ತೀವಿ ಅಂತಾ ದೇವರ ಮುಂದೆ ಪ್ರಮಾಣ ಮಾಡಿದ್ದಾರೆ.
ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುವ ಕುರಿತು ಪಾಲಕರ ಗಮನಕ್ಕೆ ತಂದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇದ್ರಿಂದ ಬೇಸತ್ತ ಈ ಮೂವರು ವಿದ್ಯಾರ್ಥಿನಿಯರು ಮೂರು ದಿನಗಳ ಕಾಲ ಉಪವಾಸ ಕುಳಿತಿದ್ದಾರೆ. ಮಕ್ಕಳ ಪ್ರಮಾಣಕ್ಕೆ ಬೆಚ್ಚಿದ ಪಾಲಕರು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಶೌಚಾಲಯ ನಿರ್ಮಾಣಕ್ಕೆ ಅಣಿಯಾಗಿದ್ದಾರೆ.
ಇದೀಗ ಅಕ್ಟೋಬರ್ 2ರೊಳಗೆ ಕೊಪ್ಪಳವನ್ನು ಬಯಲು ಶೌಚಮುಕ್ತ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾ ಪಂಚಾಯ್ತಿ ಮುಂದಾಗಿದ್ದು, ಮಿಷನ್ 200 ಅನ್ನೋ ಅಭಿಯಾನ ಹಮ್ಮಿಕೊಂಡಿದೆ. 200 ಗಂಟೆಯಲ್ಲಿ 12 ಸಾವಿರ ಶೌಚಾಲಯ ಕಟ್ಟುವ ಗುರಿ ಹೊಂದಿದೆ. ಸಿಇಓ ವೆಂಕಟರಾಜ್ ಕೂಡ ವಿದ್ಯಾರ್ಥಿನಿಯರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಇದೀಗ ಮತ್ತೊಮ್ಮೆ ಕೊಪ್ಪಳದಲ್ಲಿ ಶೌಚಾಲಯ ಕ್ರಾಂತಿ ಆಗಿದೆ. ಒಟ್ಟಿನಲ್ಲಿ ಮೂವರು ವಿದ್ಯಾರ್ಥಿನಿಯರು ಆಣೆ ಪ್ರಮಾಣ, ಉಪವಾಸ ಮಾಡಿ ಶೌಚಾಲಯ ಕಟ್ಟಿಕೊಳ್ಳೊವಲ್ಲಿ ಸಮಾಜಕ್ಕೆ ಮಾದರಿಯಾಗಿದ್ದಾರೆ.