ಲಕ್ನೋ: ಇಂದು ನಸುಕಿನ ಜಾವ ಉತ್ತರಪ್ರದೇಶದ ಮಾಣಿಕ್‍ಪುರ್ ರೈಲ್ವೆ ನಿಲ್ದಾಣದ ಬಳಿ ವಾಸ್ಕೋಡಗಾಮಾ-ಪಾಟ್ನಾ ಎಕ್ಸ್ ಪ್ರೆಸ್ ರೈಲಿನ 13 ಬೋಗಿಗಳು ಹಳಿ ತಪ್ಪಿದ ಪರಿಣಾಮ ಮೂವರು ಮೃತಪಟ್ಟಿದ್ದು, 8 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ
ಇಂದು ಬೆಳಗ್ಗೆ 4.18 ರ ಸಮಯದಲ್ಲಿ ಬಿಹಾರದ ಪಾಟ್ನಾಗೆ ತೆರಳುತ್ತಿದ್ದ ರೈಲಿನ 13 ಬೋಗಿಗಳು ಹಳಿ ತಪ್ಪಿವೆ. ಇದಕ್ಕೂ ಮುಂಚೆ ಕಳೆದ ದಿನ ಲಕ್ನೋ ಬಳಿ ಪ್ಯಾಸೆಂಜರ್ ರೈಲಿಗೆ ಬೊಲೆರೊ ಡಿಕ್ಕಿಯಾಗಿ ನಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದರು.
ರೈಲ್ವೆ ಸಚಿವರಾದ ಪಿಯೂಶ್ ಗೋಯಲ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ., ತೀವ್ರವಾಗಿ ಗಾಯಗೊಂಡವರಿಗೆ 1 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗಳಾಗಿರುವವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ರೈಲು ಅಪಘಾತದಲ್ಲಿ 8 ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಬಿಹಾರದ ಬೆಟ್ಟಿಹಾ ಜಿಲ್ಲೆಯ ತಂದೆ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂದು ಚಿತ್ರಕೂಟ ಎಸ್‍ಪಿ ಪ್ರತಾಪ್ ಗೋಪೇಂದ್ರ ಸಿಂಗ್ ತಿಳಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಮಧ್ಯ ರೈಲ್ವೇ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಳ್ವೀಯಾ ತಿಳಿಸಿದ್ದಾರೆ.
ಅಪಘಾತ ನಡೆದ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಈಗಾಗಲೇ ಹೋಗಿದ್ದು, ಅಪಘಾತಕ್ಕೆ ಕಾರಣ ಏನೆಂಬುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ರೈಲಿನ ಟ್ರ್ಯಾಕ್ ಮುರಿದಿದ್ದರಿಂದ ಈ ಅಪಘಾತ ಸಂಭವಿಸಿರಬಹುದು ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆನಂದ್ ಕುಮಾರ್ ಹೇಳಿದ್ದಾರೆ.
ಗಾಯಗೊಂಡವರನ್ನು ಮಣಿಕ್‍ಪುರ ಮತ್ತು ಚಿತ್ರಕೂಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೇ ಮಂಡಳಿಯ ಅಧ್ಯಕ್ಷರನ್ನು ಸ್ಥಳಕ್ಕೆ ಬರುವಂತೆ ಸೂಚಿಸಿದ್ದೇವೆ. ಈ ಅಪಘಾತದಿಂದ ಪಾಟ್ನಾ -ಅಲಹಬಾದ್ ರೈಲು ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯವಾಗಿದೆ ಎಂದು ರೈಲ್ವೆ ವಕ್ತಾರರಾದ ಅನಿಲ್ ಸಕ್ಸೇನಾ ತಿಳಿಸಿದರು.
2 dead and 8 injured in Vasco De Gama Patna express train accident near UP’s Banda pic.twitter.com/czKOweWz8e
— ANI (@ANI) November 24, 2017
2 dead and 8 injured in Vasco De Gama Patna express train accident near UP’s Banda pic.twitter.com/8Q2f6rRdBP
— ANI (@ANI) November 24, 2017