ಮಂಡ್ಯ: ಸಾಲು ಸಾಲು ಗೊಂದಲ, ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಮಂಡ್ಯದ ಸಾಹಿತ್ಯ ಸಮ್ಮೇಳನ (Mandya Kannada Sahitya Sammelana) ಸಂಪನ್ನವಾಗಿದೆ. ಮೂರು ದಿನಗಳ ಕಾಲ ಸಕ್ಕರೆನಾಡು ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ತೆರೆ ಬಿದ್ದಿದೆ. ಮೂರು ದಿನದ ನುಡಿ ಜಾತ್ರೆ, ದಾಖಲೆಯ ಜನ ಜಾತ್ರೆಯೊಂದಿಗೆ ಯಶಸ್ವಿಯಾಯ್ತು.
ಮಂಡ್ಯದ ಸಾಹಿತ್ಯ ಸಮ್ಮೇಳನಕ್ಕೆ ಜನ ಬರ್ತಾರಾ? ಸಾಕಷ್ಟು ಗೊಂದಲಗಳ ನಡುವೆ ಸಮ್ಮೇಳನ ಯಶಸ್ವಿಯಾಗುತ್ತಾ? ಅನ್ನೋ ಚರ್ಚೆಗಳು ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತು. ಆದರೆ ಸಮ್ಮೇಳನಕ್ಕೆ ನಿರೀಕ್ಷೆಗೂ ಮೀರಿದ ಜನ ಸೇರುವ ಮೂಲಕ ಆ ಎಲ್ಲಾ ಚರ್ಚೆಗಳಿಗೆ ಮಂಡ್ಯ ಜನ ಉತ್ತರ ಕೊಟ್ಟಿದ್ದಾರೆ.
Advertisement
ಮೊದಲ ದಿನದಿಂದ ಕೊನೆ ದಿನದವರೆಗೂ ಸಾಗರೋಪಾದಿಯಾಗಿ ಜನ ಸಮ್ಮೇಳನಕ್ಕೆ ಬರುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣವಾದ್ರು. ಜೊತೆಗೆ ಮೂರು ದಿನಗಳೂ ಕೂಡ ಯಾವುದೇ ಗೊಂದಲ, ಗದ್ದಲಕ್ಕೆ ಎಡೆ ಮಾಡಿಕೊಡದೆ ಹೊರಗಿನಿಂದ ಬಂದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳಿಗೆ ಉತ್ತಮ ಆತಿಥ್ಯ ನೀಡುವಲ್ಲೂ ಸೈ ಎನಿಸಿಕೊಂಡರು.
Advertisement
Advertisement
ಈ ಬಾರಿಯ ಸಮ್ಮೇಳನದಲ್ಲಿ ಹೊರನಾಡ ಕನ್ನಡಿಗರಷ್ಟೇ ಅಲ್ಲದೇ, ವಿದೇಶಿ ಕನ್ನಡಿಗರು ಕೂಡ ಭಾಗಿಯಾಗಿದರು. ಇದೇ ಮೊದಲ ಬಾರಿಗೆ ವಿದೇಶಿ ಕನ್ನಡಿಗರಿಗಾಗಿ ವಿಶೇಷ ಗೋಷ್ಠಿಯನ್ನೇ ಆಯೋಜನೆ ಮಾಡಲಾಗಿತ್ತು. ಇದೇ ಸಮ್ಮೇಳನದಲ್ಲಿ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಬೆಂಕಿ ಬಸಣ್ಣ ಅವರ ಸಂಪಾದಕತ್ವದಲ್ಲಿ ಮುದ್ರಿಸಿರುವ ವಿಶ್ವಕನ್ನಡ ಕೂಟಗಳ ಕೈಪಿಡಿ ಬಿಡುಗಡೆ ಮಾಡಲಾಯ್ತು. ಇದನ್ನೂ ಓದಿ: ಸಿ.ಟಿ ರವಿ ಸ್ವಾಗತಕ್ಕೆ ಬಂದಿದ್ದ 7 ಆಂಬುಲೆನ್ಸ್‌ಗಳ ವಿರುದ್ಧ ಎಫ್‍ಐಆರ್
Advertisement
ಮೂರು ದಿನಗಳ ಸಮ್ಮೇಳನದಲ್ಲಿ 20ಕ್ಕೂ ಹೆಚ್ಚು ವಿಚಾರಗೋಷ್ಠಿ, ಕವಿಗೋಷ್ಠಿಗಳನ್ನು ಆಯೋಜಿಸಿ ಎಲ್ಲಾ ವರ್ಗದವರಿಗೂ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಯ್ತು. ಇದರೊಂದಿಗೆ ಈ ಬಾರಿಯ ಸಮ್ಮೇಳನದಲ್ಲಿ ಪುಸ್ತಕ ಮೇಳದ ಜೊತೆ ಜೊತೆಗೆ ಸ್ಥಳೀಯ ಹಾಗೂ ಖ್ಯಾತ ಕಲಾವಿದರು ನಡೆಸಿಕೊಟ್ಟ ನುಡಿ ಜಾತ್ರೆಯಲ್ಲಿ ಸ್ವರ ಯಾತ್ರೆ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಪ್ರಮುಖ ಆಕರ್ಷಣೀಯವಾಗಿತ್ತು.
ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯ ಸಮ್ಮೇಳನದಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ಮಾಹಿತಿ ಕೇಂದ್ರ ಕೂಡ ತೆರೆದು ರೈತರನ್ನ ಉತ್ತೇಜಿಸುವ ಪ್ರಯತ್ನ ಮಾಡಲಾಯಿತು. ಇದೇ ಮೊದಲ ಬಾರಿಗೆ ಅತೀ ಗಣ್ಯರಿಂದ ಹಿಡಿದು ಶ್ರೀ ಸಾಮಾನ್ಯನವರೆಗೂ ಒಂದೇ ಬಗೆಯ ಊಟೋಪಚಾರ ಮಾಡಲಾಗಿತ್ತು. ಸಮ್ಮೇಳನದ ಅಂಗವಾಗಿ ಮಂಡ್ಯ ನಗರವನ್ನ ವರ್ಣರಂಜಿತ ದೀಪಾಂಲಕಾರದಿಂದ ಸಿಂಗರಿಸಲಾಗಿತ್ತು. ಸಮಾರೋಪದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರು ದಸರಾದಲ್ಲಿ ಮಾತ್ರ ನಡೆಯುತ್ತಿದ್ದ ಪೊಲೀಸ್ ಬ್ಯಾಂಡ್ ಗೆ ಜನ ಮನಸೋತರು.
ಸಮ್ಮೇಳನದ ಸಮಾರೋಪ ಸಮಾರಂಭ ರಾಜಕೀಯ ಬದ್ಧ ವೈರಿಗಳ ಮುಖಾಮುಖಿಗೆ ಸಾಕ್ಷಿಯಾಯ್ತು. ಹೆಚ್‌ಡಿಕೆ ವೇದಿಕೆ ಏರುತ್ತಿದ್ದಂತೆ ಎದ್ದುನಿಂತಿದ್ದ ಚಲುವರಾಯಸ್ವಾಮಿ ಮುಂದೆಯೇ ಹೋದರೂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿಸದೇ ಮುಂದೆ ಸಾಗಿ ನಿಗದಿಯಾಗಿದ್ದ ಆಸನದಲ್ಲಿ ಕುಳಿತರು.
ಸ್ವಾಗತದ ವೇಳೆ ಖುದ್ದು ಜಿಲ್ಲಾ ಮಂತ್ರಿಯಾದ ಚಲುವರಾಯಸ್ವಾಮಿಯವರೇ (Cheluvarayaswamy) ಹೆಚ್‌ಡಿಕೆಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿ ಗಮನ ಸೆಳೆದರು. ನಂತರ ಭಾಷಣ ಮಾಡುವ ವೇಳೆ ಸಮ್ಮೇಳನ ಯಶಸ್ವಿಗೆ ಸಚಿವ ಚಲುವರಾಯಸ್ವಾಮಿ ಶ್ರಮ ಇದೆ ಎಂದು ಕುಮಾರಸ್ವಾಮಿ ಹೊಗಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು:
* ಕನ್ನಡ ಭಾಷಾ ಅಭಿವೃದ್ದಿ ಅಧಿನಿಯಮ- 2022 ಸಮಗ್ರ ಜಾರಿಗೆ ಒತ್ತಾಯ.
* ಸರ್ಕಾರಿ ಕನ್ನಡ ಶಾಲೆಗೆ ಕಟ್ಟಡ, ವಾಚನಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಯನ್ನು ಭರ್ತಿ ಮಾಡಬೇಕು
* ಸರೋಜಿನಿ ಮಹಿಷಿ ವರದಿ ಅನುಷ್ಠಾನಗೊಳಿಸಬೇಕು.
* ಧಾರವಾಡದಲ್ಲಿ ನಡೆಯಬೇಕಿದ್ದ ಸಮ್ಮೇಳನವನ್ನ ಶೀಘ್ರ ಮಾಡಬೇಕು.
* ರಾಷ್ಟ್ರಕವಿ ಪ್ರಶಸ್ತಿಯನ್ನು ಘೋಷಿಸಿಬೇಕು.