ಚಿಕ್ಕಬಳ್ಳಾಪುರ: ಕಳೆದ 3 ದಿನಗಳ ಹಿಂದೆ ಜನಿಸಿದ್ದ ಮಗು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ತಾಲೂಕಿನ ಪುರದಗಡ್ಡೆ ಗ್ರಾಮದ ಸಿ. ಶೋಭಾ-ರಮೇಶ್ ದಂಪತಿಯ ಮಗು ಮೃತಪಟ್ಟಿದೆ. ಮೂರು ದಿನಗಳ ಹಿಂದೆ ಚಿಕ್ಕಬಳ್ಳಾಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಗಂಡು ಮಗು ಜನಿಸಿತ್ತು. ಮಗುವಿಗೆ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಮಗು ಮೃತಪಟ್ಟಿರೋದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
Advertisement
Advertisement
ಹೆರಿಗೆ ಸಮಯದಲ್ಲಿ ಪ್ರಸೂತಿ ತಜ್ಞೆ ಮಂಜುಳಾ 12 ಸಾವಿರ ರೂ. ಲಂಚ ಪಡೆದಿದ್ದಾರೆ ಅಂತ ಮಗುವಿನ ತಾತ ಆರೋಪಿಸಿದ್ದಾರೆ. ಹೆರಿಗೆಗೆ ಲಂಚ ಪಡೆದರೂ ಪ್ರಸೂತಿ ತಜ್ಞೆ, ಹೆರಿಗೆ ನಂತರ ಮಗುವಿನ ಆರೋಗ್ಯ ಹಾಗೂ ಆರೈಕೆ ಕಡೆ ಗಮನ ಕೊಡಲಿಲ್ಲ. ಮಕ್ಕಳ ಘಟಕದಲ್ಲಿರುವ ದಾದಿಯರು ಸರಿಯಾಗಿ ಸ್ಪಂದಿಸಲಿಲ್ಲ. ಸೂಕ್ತ ಸಮಯದಲ್ಲಿ ಆರೈಕೆ ಹಾಗೂ ಚಿಕಿತ್ಸೆಯಿಲ್ಲದೆ ಮಗು ಮೃತಪಟ್ಟಿದ್ದು ಅದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮಗುವಿನ ತಂದೆ ರಮೇಶ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
Advertisement
Advertisement
ಮತ್ತೊಂದೆಡೆ ಆಸ್ಪತ್ರೆಯ ವೈದ್ಯರು ಮಗುವಿನ ಸಾವಿನ ಬಗ್ಗೆ ಸ್ಪಷ್ಟನೆ ನೀಡಿದ್ದು, ಆರೋಗ್ಯವಾಗಿದ್ದ ಮಗು ಸಾವಿನ ನಂತರ ಬ್ಲೂ ಕಲರ್ ಗೆ ತಿರುಗಿದ್ದು ಆಸ್ಪಿರೇಷನ್ ಸಮಸ್ಯೆ ಇಲ್ಲ, ಹೃದಯ ಸಮಸ್ಯೆ ಇಲ್ಲ, ಮೆಟಾಬಾಲಿಸಂ ಸಮಸ್ಯೆ ಇರಬಹುದು ಪರಿಶೀಲನೆ ನಡೆಸುತ್ತೇವೆ. ಚಿಕಿತ್ಸೆ ಮತ್ತು ಆರೈಕೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv