ಭುವನೇಶ್ವರ: ಸಾಮಾನ್ಯವಾಗಿ ತಂದೆ-ತಾಯಿಯ ಅಂತಿಮ ವಿಧಿ-ವಿಧಾನವನ್ನು ಗಂಡು ಮಕ್ಕಳು ಮಾಡಬೇಕೆಂಬ ಸಂಪ್ರದಾಯವಿದೆ. ಆದರೆ ಇಲ್ಲಿ ಮೂವರು ಸಹೋದರಿಯರು ತಮ್ಮ ತಂದೆಯ ಅಂತ್ಯಕ್ರಿಯೆಗೆ ಹೆಗಲು ಕೊಟ್ಟಿದ್ದಾರೆ.
ಈ ಘಟನೆ ಒಡಿಶಾದ ಮಲ್ಕಂಗಿರಿ ಜಿಲ್ಲೆಯಲ್ಲಿ ನಡೆದಿದೆ. ಕುಮುಟಿಗುಡ ಗ್ರಾಮದ ಮೂವರು ಸಹೋದರಿಯರು ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ವಿಧಿವಿಧಾನವನ್ನು ನೆರವೇರಿಸಿದ್ದಾರೆ.
Advertisement
Advertisement
ಸಾಸ್ಮಿತಾ, ಸ್ಮಿತಾ ಮತ್ತು ಸಂಗೀತ ಮೂವರು ಸಹೋದರಿಯರು ಪುರುಷರೇ ಮಾಡಬೇಕು ಎಂಬ ಸಂಪ್ರದಾಯವನ್ನು ಧಿಕ್ಕರಿಸಿ ತಮ್ಮ ತಂದೆ ಸುಶಾಂತ್ ಪಟ್ನಾಯಕ್ ಅವರ ಅಂತಿಮ ಕ್ರಿಯೆ ನೆರವೇರಿಸಿದ್ದಾರೆ.
Advertisement
ಸುಶಾಂತ್ ಪಟ್ನಾಯರ್ ಅವರು ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆರೋಗ್ಯ ಸುಧಾರಿಸದ ಪರಿಣಾಮ ಹೆಚ್ಚಿನ ಚಿಕಿತ್ಸೆಗಾಗಿ ಕೊರಾಪುಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸುಶಾಂತ್ ಪಟ್ನಾಯರ್ ಮೃತಪಟ್ಟಿದ್ದಾರೆ. ಬೆರ್ಹಾಂಪುರದಲ್ಲಿ ಕೆಲಸ ಮಾಡುತ್ತಿದ್ದ ಸಹೋದರಿಯರು ತಂದೆಯ ಸಾವಿನ ಬಗ್ಗೆ ತಿಳಿದು ತಕ್ಷಣ ಕುಮುಟಿಗುಡಕ್ಕೆ ಧಾವಿಸಿದರು.
Advertisement
ಅಂತಿಮ ಕ್ರಿಯೆಯನ್ನು ನನ್ನ ಮೂವರು ಹೆಣ್ಣು ಮಕ್ಕಳೇ ಮಾಡಬೇಕೆಂದು ಪಾಟ್ನಾಯಕ್ ಆಸೆ ಪಟ್ಟಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ನಂತರ ಯಾವುದೇ ಹಿಂಜರಿಕೆಯಿಲ್ಲದೆ ಸಹೋದರಿಯರು ತಂದೆಯ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಹೆಣ್ಣು ಮಕ್ಕಳು ಅಂತಿಮ ಕ್ರಿಯೆ ಮಾಡಿದ್ದಕ್ಕೆ ಕೆಲವು ಸ್ಥಳೀಯರು ಅಸಮಾಧಾನಗೊಂಡಿದ್ದರು. ಆದರೂ ಸಹೋದರಿಯರು ತಮ್ಮ ತಂದೆಯ ಮೃತದೇಹ ಹೊರಲು ಹೆಗಲು ಕೊಟ್ಟು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.