– ಕಸ ಸಂಗ್ರಹಿಸುವ ಆಟೋ ಚಾಲಕರು, ಕೆಲಸಗಾರರ ಹೆಸರಲ್ಲಿ ವಂಚನೆ
– ದೋಖಾದ ಹಿಂದೆ ಅಧಿಕಾರಿಗಳು ಶಾಮೀಲು ಶಂಕೆ
ತುಮಕೂರು: ಮಹಾನಗರ ಪಾಲಿಕೆಗೆ ಖಾಸಗಿ ಕಂಪನಿಯೊಂದು ಬರೋಬ್ಬರಿ 3 ಕೋಟಿ ರೂ. ಪಂಗನಾಮ ಇಟ್ಟಿದೆ. ಕಸ ಸಂಗ್ರಹಿಸುವ ಆಟೋ ಚಾಲಕರು ಹಾಗೂ ಕಾರ್ಮಿಕರ ಹೆಸರಿನಲ್ಲಿ ಮೂರು ಕೋಟಿ ರೂ. ವಂಚನೆ ಮಾಡಿದೆ. ಈ ದೋಖಾದ ಹಿಂದೆ ಪಾಲಿಕೆಯ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂಬ ಗುಮಾನಿ ಎದ್ದಿದೆ.
ಕಸ ಸಂಗ್ರಹಿಸುವ ಆಟೋ ಚಾಲಕರು, ಕೆಲಸಗಾರರ ಹೆಸರಲ್ಲಿ ತುಮಕೂರು ಮಹಾನಗರ ಪಾಲಿಕೆಗೆ ಖಾಸಗಿ ಕಂಪನಿ ತಿರುಪತಿ ನಾಮ ಇಟ್ಟಿದೆ. ಕಸ ವಿಲೇವಾರಿ ಮಾಡುವ ಗುತ್ತಿಗೆ ಪಡೆದ ಶ್ರೀ ಗಣೇಶ್ ಶಂಕರ್ ಎನ್ವಿರಾನ್ಸೆಂಟ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ದೋಖಾ ಮಾಡಿದೆ. 3 ವರ್ಷಗಳಲ್ಲಿ ಪ್ರತಿ ತಿಂಗಳು 11ರಿಂದ 12 ಲಕ್ಷ ರೂಪಾಯಿ ಹೆಚ್ಚುವರಿ ಹಣ ಪಡೆದ ಈ ಕಂಪನಿ ಕಾರ್ಮಿಕರಿಗೆ ಹೆಸರಲ್ಲಿ ಕಟ್ಟಬೇಕಾದ ಪಿಎಫ್ ಹಾಗೂ ಇಎಸ್‌ಐ ಕಟ್ಟದೇ ವಂಚಿಸಿದೆ. ಜಿಲ್ಲಾಧಿಕಾರಿ ಆದೇಶ ಮೀರಿ ಪ್ರತಿ ತಿಂಗಳು ಹೆಚ್ಚುವರಿ ಬಿಲ್ ಅನ್ನು ಪಾಲಿಕೆಗೆ ಸಲ್ಲಿಸಿ ಕಾರ್ಮಿಕರಿಗೆ ವಂಚಿಸಿರುವ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತುರ್ತಾಗಿ ವರದಿ ಸಲ್ಲಿಸುವಂತೆ ರಾಜ್ಯ ಕರ್ಮಚಾರಿಗಳ ಆಯೋಗವು ಪಾಲಿಕೆಗೆ ತಾಕೀತು ಮಾಡಿದೆ.
ಮಹಾನಗರ ಪಾಲಿಕೆ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆಯಡಿ ಪ್ಯಾಕೇಜ್-03ರಡಿ ಮನೆ, ಮನೆಗಳಲ್ಲಿ ಕಸ ಸಂಗ್ರಹಿಸುವ 98 ಆಟೋಗಳ ಚಾಲಕರು, ರಸ್ತೆ, ಬೀದಿ ಬದಿ ಕಸ ಸಂಗ್ರಹಣೆಯ 96 ಜನರಿಗೆ ಮೂಲ ಸೌಲಭ್ಯ ಒದಗಿಸಬೇಕಿತ್ತು. ಆದರೆ ಕಂಪನಿ ಮಾಡಿಲ್ಲ.
ಗಣೇಶ್ ಶಂಕರ ಕಂಪನಿ ತುಮಕೂರು ಮಹಾನಗರ ಪಾಲಿಕೆಗೆ ಮಾನವ ಸಂಪನ್ಮೂಲ ಒದಗಿಸುತ್ತಿದ್ದು, ಕಸದಲ್ಲೇ ರಸ ಉತ್ಪತ್ತಿ ಮಾಡುವುದರಲ್ಲಿ ಎತ್ತಿದ ಕೈ ಎನಿಸಿದೆ. ಮನೆ, ಮನೆಗಳಲ್ಲಿ ಕಸ ಸಂಗ್ರಹಿಸುವ 98 ಆಟೋಗಳ ಚಾಲಕರು, ಕ್ಲಿನರ್‌ಗಳು ಹಾಗೂ ರಸ್ತೆ, ಬೀದಿ ಬದಿ ಕಸ ಸಂಗ್ರಹಣೆಯ ಲೋಡರ್ಸ್ ಅಲ್ಲದೆ, ಜೆಸಿಬಿ, ಟಿಪ್ಪರ್‌ಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರನ್ನು ಒದಗಿಸಿದೆ. ಈ ಕಂಪನಿ ಚಾಲಾಕಿತನ ತೋರುತ್ತಾ ಬಂದಿದ್ದು, 30 ದಿನ ಹಾಜರಾತಿ ತೋರಿಸುತ್ತದೆ. ಆದರೆ, ಭಾನುವಾರ ರಜಾ ದಿನದ ಸಂಬಳ ಕಾರ್ಮಿಕರಿಗೆ ಕಡಿತ ಮಾಡುತ್ತದೆ. ಈ ದೋಖಾದ ಹಿಂದೆ ಹತ್ತಾರು ವರ್ಷದಿಂದ ಪಾಲಿಕೆಯಲ್ಲೇ ಬೀಡುಬಿಟ್ಟಿದ್ದ ಕೆಲ ಅಧಿಕಾರಿಗಳು ಇದ್ದಾರೆ ಎನ್ನಲಾಗಿದೆ.