ಚಿತ್ರದುರ್ಗ: ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು 3 ಕೋಟಿ ರೂ. ವೆಚ್ಚದ ಮಹರ್ಷಿ ವಾಲ್ಮೀಕಿ ಸಮುದಾಯ ಭವನಕ್ಕೆ ಇಂದು ಭೂಮಿಪೂಜೆ ಮಾಡಿದ್ದಾರೆ.
ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಪಟ್ಟಣದಲ್ಲಿ ಸೋಮವಾರ 3 ಕೋಟಿ ರೂ. ವೆಚ್ಚದ ಮಹರ್ಷಿ ವಾಲ್ಮೀಕಿ ಸಮುದಾಯ ಭವನದ ಶಂಕುಸ್ಥಾಪನಾ ಸಮಾರಂಭ ನೆರೆವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಮೀನು ಮಂಜೂರು, ಗಂಗಾ ಕಲ್ಯಾಣ ಯೋಜನೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸ್ವಯಂ ಉದ್ಯೋಗ ಸಾಲ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು, ಸಮುದಾಯದ ಎಲ್ಲರೂ ಸರ್ಕಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ: RSS ಬಗ್ಗೆ ಮಾತನಾಡೋದು ಬೆಂಕಿ ಜೊತೆ ಸರಸವಿದ್ದಂತೆ: ಈಶ್ವರಪ್ಪ
ಮಾಜಿ ಶಾಸಕ ಪೂರ್ಣಮುತ್ತಪ್ಪ ಅವರನ್ನು ನೆನಪು ಮಾಡಿಕೊಳ್ಳಬೇಕು. ಅವರ ಪರಿಶ್ರಮದಿಂದ 2 ಎಕರೆ ಜಮೀನನ್ನು ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ನೀಡಿದ್ದಾರೆ. ಮದುವೆ ಮತ್ತು ಮುಂತಾದ ಅನೇಕ ಶುಭ ಸಮಾರಂಭಗಳಿಗೆ ಈ ಸಮುದಾಯ ಭವನ ಸದುಪಯೋಗವಾಗಬೇಕು ಎಂಬ ದೂರದೃಷ್ಟಿಯಿಂದ ಜಮೀನು ನೀಡಿದ್ದಾರೆ ಎಂದರು.
ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ಹಟ್ಟಿ ಮಲ್ಲಪ್ಪನಾಯಕ ಸಮುದಾಯ ಭವನದ ಅಧ್ಯಕ್ಷ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ, ಸಂಘದ ನಿರ್ದೇಶಕರಾದ ಬಸವರಾಜು, ಖಜಾಂಚಿ ಓಬಣ್ಣ, ಸಂಘದ ಹಿರಿಯ ನಿರ್ದೇಶಕರಾದ ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಈ ವೇಳೆ ಇದ್ದರು. ಇದನ್ನೂ ಓದಿ: ಮನೆಗೆ ನುಗ್ಗಿ ಕಳ್ಳತನ ಮಾಡಿದ ಚೋರ 48 ಗಂಟೆಗಳಲ್ಲಿ ಪೊಲೀಸರ ಅತಿಥಿ