ಉಡುಪಿ: ಮಹಾಮಾರಿ ಕೊರೊನಾ ಕರಾವಳಿ ಜಿಲ್ಲೆ ಉಡುಪಿಯ ಜನರನ್ನು ಬೆಚ್ಚಿ ಬೀಳಿಸಿದೆ. ಇಂದು ಇಬ್ಬರಿಗೆ ಕೊರೊನಾ ಸೋಂಕು ತಗಲಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದ್ದು, ಈ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸೋಂಕಿತರ ಸಂಖ್ಯೆ ಮೂರಕ್ಕೇರಿದೆ ಎಂದು ಡಿಎಚ್‍ಒ ಡಾ. ಸುಧೀರ್ ಚಂದ್ರ ಮಾಹಿತಿ ಕೊಟ್ಟಿದ್ದು, ಶಿವಮೊಗ್ಗ ಪ್ರಯೋಗಾಲಯದಿಂದ ಬಂದ ವೈದ್ಯಕೀಯ ವರದಿಯಲ್ಲಿ ಕೊರೊನಾ ದೃಢಪಟ್ಟಿತ್ತು.
ದುಬೈನಿಂದ ಬಂದ ವ್ಯಕ್ತಿಗೆ ಸೋಂಕು
ದುಬೈನಿಂದ ಬಂದಿದ್ದ ಕಾಪು ತಾಲೂಕಿನ 25 ವರ್ಷದ ಯುವಕ ಕೊರೊನಾ ಸೋಂಕಿಗೆ ತುತ್ತಾಗಿದ್ದಾನೆ. ಮಾರ್ಚ್ 17ಕ್ಕೆ ಆತ ತನ್ನ ಮನೆಗೆ ಬಂದಿದ್ದನು. ಮಾರ್ಚ್ 27ರಂದು ಆತನಲ್ಲಿ ಕೆಮ್ಮು, ಶೀತ, ನೆಗಡಿ ಲಕ್ಷಣ ಕಂಡುಬಂದಿತ್ತು. ರೋಗಿ ಜಿಲ್ಲಾಸ್ಪತ್ರೆಗೆ ಬಂದಿದ್ದಾಗ ಬೆಡ್ ಇಲ್ಲದ ಕಾರಣಕ್ಕೆ ಆತನನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಆತ ಕುಟುಂಬಸ್ಥರು, ಗೆಳೆಯರು, ಸಂಬಂಧಿಕರ ಮಕ್ಕಳ ಜೊತೆ ಬೆರೆತಿದ್ದನು. ನಗರದಲ್ಲಿರುವ ಅಕ್ಕನ ಮನೆಗೆ ಓಡಾಡಿದ್ದನು ಎಂಬ ಮಾಹಿತಿಯಿದ್ದು, ಈ ವ್ಯಕ್ತಿಯ ಪ್ರಕರಣ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ವಿದೇಶದಿಂದ ಬಂದು 10 ದಿನದ ನಂತರ ಕೊರೊನಾ ಸೋಂಕು ಉಲ್ಬಣಿಸಿದೆ ಎನ್ನುವುದು ವರದಿಯಾಗಿದೆ.
ಕೇರಳಕ್ಕೆ ತೆರಳಿದ್ದ ಯುವಕನಿಗೆ ಕೊರೊನಾ
ವಿದೇಶ ಪ್ರಯಾಣ ಹಿನ್ನೆಲೆ ಇಲ್ಲದ, ವಿದೇಶ ಪ್ರಯಾಣ ಮಾಡಿದ ವ್ಯಕ್ತಿಗಳ ನೇರ ಸಂಪರ್ಕ ಇಲ್ಲದವನಿಗೆ ಕೊರೊನಾ ಸೋಂಕು ತಗುಲಿದೆ. ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಉಡುಪಿಯ 29 ವಯಸ್ಸಿನ ಯುವಕ ಕೊರೊನಾ ಹಾವಳಿ ಶುರುವಾಗುವ ಮೊದಲೇ ಕೇರಳಕ್ಕೆ ಕೆಲಸಕ್ಕೆ ತೆರಳಿದ್ದನು. ತಿರುವನಂತಪುರಂನಲ್ಲಿ ಇಸ್ರೋ ಸಂಸ್ಥೆಗೆ ಸಂಬಂಧಿಸಿದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದನು.
ಕೇರಳದಲ್ಲಿ ಕೊರೊನಾ ಅಟ್ಟಹಾಸ ಮೆರೆದಾಗ ತನ್ನ ಜೊತೆಗಿದ್ದ 30 ಯುವಕರ ಜೊತೆಗೆ ಬಸ್ಸಲ್ಲಿ ತಲಪಾಡಿ(ದಕ್ಷಿಣ ಕನ್ನಡ -ಕೇರಳ ಬಾರ್ಡರ್)ಗೆ ಬಂದಿದ್ದರು. ಅಲ್ಲಿಂದ ಇಡೀ ತಂಡವನ್ನು ಬಸ್ಸಲ್ಲಿ ಉಡುಪಿಗೆ ಸಾಗಿಸಿ ಆಯುಷ್ ಆಸ್ಪತ್ರೆಯ ಕೊಠಡಿಗಳಲ್ಲಿ ಇರಿಸಲಾಗಿದೆ. ಡಿಸಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಅವರ ಮೇಲೆ ನಿಗವಹಿಸಲು ಸೂಚಿಸಿದ್ದರು.
ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿದ್ದ ಯುವಕರ ತಂಡದಲ್ಲಿ 31 ಜನ ಇದ್ದರು. ಈ ಪೈಕಿ ಒಬ್ಬನಿಗೆ ಶೀತ, ತಲೆನೋವು ಶುರುವಾಗಿತ್ತು. ಮಾರ್ಚ್ 26ಕ್ಕೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೇರಳದಿಂದ ಬಂದ ನಂತರ ಎಲ್ಲಾ 31 ಜನರನ್ನು ಐಸೋಲೇಟೆಡ್ ಮಾಡಲಾಗಿದೆ.