ದಾವಣಗೆರೆ: ಕರ್ತವ್ಯ ಲೋಪವೆಸಗಿದ ಮೂವರು ಪೊಲೀಸ್ (Police) ಪೇದೆಗಳನ್ನು ಅಮಾನತು ಮಾಡಿ ದಾವಣಗೆರೆ (Davanagere) ಎಸ್‍ಪಿ ಉಮಾ ಪ್ರಶಾಂತ್ ಅದೇಶ ಹೊರಡಿಸಿದ್ದಾರೆ.
ಬಸವನಗರ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಂಜಪ್ಪ, ಕಾನ್‍ಸ್ಟೇಬಲ್ ಪಿ.ಆಕಾಶ್, ಆರ್‌ಎಂಸಿ ಠಾಣೆಯ ಮುಖ್ಯಪೇದೆ ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಜ.29ರಂದು ಬಸವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಸಿ ರಸ್ತೆಯಲ್ಲಿರುವ ಜ್ಯುವೆಲರ್ಸ್ ಶಾಪ್‍ನಲ್ಲಿ ಕಳ್ಳತನವಾಗಿತ್ತು. ಅಂದು ಗಸ್ತಿನಲ್ಲಿದ್ದ ಇಬ್ಬರು ಬಸವನಗರದ ಪೇದೆಗಳು ಅನುಮಾನಸ್ಪದ ವ್ಯಕ್ತಿಗಳನ್ನು ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದರು.
ಕಳ್ಳತನ ಮಾಡಿ ಆರೋಪಿಗಳು ಪಲ್ಸರ್ ಬೈಕ್‍ನಲ್ಲಿ ಬಾಡಾ ಕ್ರಾಸ್ ನಾಕಾಬಂದಿ ಮೂಲಕ ಹಾದು ಹೋಗಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಚಂದ್ರಶೇಖರ್ ಬೈಕ್ ಪರಿಶೀಲನೆ ಮಾಡದೆ ನಿರ್ಲಕ್ಷ್ಯ ಮಾಡಿದ್ದರು. ಚೆಕ್ ಪೋಸ್ಟ್ ಮೂಲಕ ಕಳ್ಳರು ಹೋಗಿರುವುದು ಸ್ಮಾರ್ಟ್‌ಸಿಟಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
- Advertisement
ಕರ್ತವ್ಯ ಲೋಪದಿಂದ ಅಂಗಡಿಯಲ್ಲಿ 18 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಮತ್ತು ನಗದು ಕಳ್ಳತನವಾಗಲು ಪರೋಕ್ಷ ಕಾರಣವಾಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಜಾದ್ ನಗರ ಠಾಣೆ ಸಿಪಿಐ ಕೋರಿದ್ದರು.
- Advertisement
ವಾಹನ ತಪಾಸಣೆ ನಡೆಸಿದ್ದರೆ ಆರೋಪಿಗಳು ಬಂಧನವಾಗುತ್ತಿತ್ತು. ಈ ಕಾರಣದಿಂದ ಮೂವರು ಪೇದೆಗಳನ್ನು ಅಮಾನತು ಮಾಡಲಾಗಿದೆ.