CrimeLatestNational

ಶಿವಲಿಂಗದ ಮೇಲೆ ಚಿಮ್ಮಿದ ರಕ್ತ- ನಿಧಿಗಾಗಿ ಮೂರು ನರಬಲಿ ಪಡೆದಿರುವ ಶಂಕೆ

ಹೈದರಾಬಾದ್: ಶಿವಲಿಂಗದ ಮೇಲೆ ರಕ್ತ ಚಿಮ್ಮಿರುವ ಭೀಕರ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ಶಿವನ ದೇಗುಲದ ಆವರಣದಲ್ಲಿ ಅರ್ಚಕ ಸೇರಿದಂತೆ ಮೂರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೋಮವಾರದಂದು ಜಿಲ್ಲೆಯ ಕೊಡಿತಿಕಿಟ ಗ್ರಾಮದ ಶಿವನ ದೇಗುಲದಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ದೇವಸ್ಥಾನದ ಆವರಣದಲ್ಲಿ ಅರ್ಚಕರಾದ ಶಿವರಾಮಿ ರೆಡ್ಡಿ(70), ಕೆ. ಕಮಲಮ್ಮ(75) ಮತ್ತು ಲಕ್ಷ್ಮಮ್ಮ(70) ಅವರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಅಲ್ಲದೆ ದೇವಸ್ಥಾನದಲ್ಲಿರುವ ಶಿವಲಿಂಗದ ಮೇಲೆ ರಕ್ತದ ಚಿಮ್ಮಿರುವುದು ಕೂಡ ಕಂಡುಬಂದಿದ್ದು, ನಿಗೂಢ ನಿಧಿಗಾಗಿ ದುಷ್ಕರ್ಮಿಗಳು ನರಬಲಿ ಪಡೆದಿರಬಹುದಾ ಎಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ನೆಲಸಿದ್ದ ಲಕ್ಷ್ಮಮ್ಮ ತಮ್ಮ ಹರಕೆ ತೀರಿಸಲು ಕೊಡಿತಿಕಿಟ ಗ್ರಾಮದ ಶಿವನ ದೇವಸ್ಥಾನಕ್ಕೆ ಭಾನುವಾರವಷ್ಟೇ ಬಂದಿದ್ದರು ಎನ್ನಲಾಗಿದ್ದು, ಹರಕೆ ತೀರಿಸಲು ಬಂದು ಮಸಣ ಸೇರಿದ್ದಾರೆ. ದೇಗುಲದ ಆವರಣದ ಬೇರೆ ಬೇರೆ ಕಡೆಯಲ್ಲಿ ಮೂವರ ಮೃತದೇಹವು ಪತ್ತೆಯಾಗಿದೆ.

ಇದನ್ನು ಕಂಡು ಆತಂಕಕ್ಕೊಳಗಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳು ಸಿಕ್ಕಿರುವ ಸ್ಥಿತಿ ಹಾಗೂ ಶಿವಲಿಂಗದ ಮೇಲೆ ರಕ್ತ ಸಿಂಚಿಸಿರುವ ದೃಶ್ಯವನ್ನು ನೋಡಿದ ಜನರು, ಈ ಕೊಲೆಗಳನ್ನು ನಿಧಿಗಾಗಿ ಮಾಡಿದ್ದಾರೆ. ನಿಧಿ ಪಡೆಯಲು ನರಬಲಿ ನೀಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಾಮಾಚಾರಕ್ಕೂ ಕೂಡ ಹತ್ಯೆ ಮಾಡಿರಬಹುದಾ? ನರಬಲಿ ಎಂದು ಈ ದುಷ್ಕೃತ್ಯ ಎಸಗಿರಬಹುದಾ? ಎಂಬ ಶಂಕೆ ಪೊಲೀಸರಲ್ಲೂ ಮೂಡಿದೆ.

Leave a Reply

Your email address will not be published.

Back to top button