ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ಮೂವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಆ ರೀತಿ ಘೋಷಣೆ ಕೂಗಿಲ್ಲ ಎಂದು ವಿತಂಡವಾದ ಮಾಡುವ ಕಾಂಗ್ರೆಸ್ ಮುಖಂಡರಿಗೆ ಇದೀಗ ತೀವ್ರ ಮುಖಭಂಗವಾಗಿದೆ ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವಥ ನಾರಾಯಣ್ (Ashwath Narayan) ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ತಮಗಾಗಿರುವ ಅಪಮಾನಕ್ಕೆ ಪ್ರತೀಕಾರವಾಗಿ ಮತ್ತು ಹತಾಶೆಯಿಂದ ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ಬಿಲಾವರ್ ಭುಟ್ಟೊ ವಿರುದ್ದ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ರವಿಯವರು (ಆರಾಧ್ಯ ಅವರು ಆ ಪ್ರತಿಭಟನೆಯಲ್ಲಿ ಭಾಗವಹಿಸದೇ ಇದ್ದರೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು) ಪಾಕಿಸ್ತಾನ ಮುರ್ದಾಬಾದ್ ಎಂದು ಕೂಗಿದ್ದರು. ಅವರಿಗೆ ಹಿಂದಿ ಭಾಷೆ ತಿಳಿಯದ ಕಾರಣ ಅವರು ಅಚಾತುರ್ಯದಿಂದ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದರು. ಆ ನಿಷ್ಠಾವಂತ ಕಾರ್ಯಕರ್ತರು ತಮ್ಮ ತಪ್ಪಿನ ಅರಿವಾಗಿ ಅವರು ಸ್ಪಷ್ಟೀಕರಣ ನೀಡಿದ್ದಲ್ಲದೇ ತಮ್ಮ ತಪ್ಪಿಗೆ ಕ್ಷಮೆಯನ್ನು ಕೋರಿದ್ದರು. ಅವರು ಘೋಷಣೆಯು ಉದ್ದೇಶಪೂರ್ವಕವಾಗಿ ಕೂಗಿದ್ದಲ್ಲ ಎಂದು ತನಿಖೆಯ ನಂತರ ತಿಳಿದ ಮೇಲೆ ಪೊಲೀಸರು ಅವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆಗಿರುವ ಘಟನೆಗಳನ್ನು ವಿಷಯಾಂತರ ಗೊಳಿಸುವುದು ಮತ್ತು ಸೇಡಿನ ಭಾವನೆಯಿಂದ ಅಮಾಯಕ ಕಾರ್ಯಕರ್ತರನ್ನು ಬಂಧಿಸುವ ಉದ್ಧಟತನ ತೋರಿರುವುದನ್ನು ನಾವು ಸಾರಾಸಗಟಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಮುಸ್ಲಿಂ ಯುವಕರನ್ನು ಬಂಧನ ಮಾಡಿದ ಕಾರಣಕ್ಕೆ ಮುಚ್ಚಿ ಹೋಗಿದ್ದ ಪ್ರಕರಣದಲ್ಲಿ ಹಿಂದೂ ಯುವಕರನ್ನು ಬಂಧಿಸಿರುವುದು ಇವರ ತುಷ್ಟೀಕರಣ ನೀತಿಯ ಭಾಗ ಇದಾಗಿದೆ. ಕಳೆದ ವಾರ ವಿಧಾನ ಸೌಧದಲ್ಲಿ ʼಪಾಕಿಸ್ತಾನ ಜಿಂದಾಬಾದ್ʼ ಎಂದು ಕೂಗಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿದ್ದರೂ ಆ ದ್ರೋಹಿಗಳನ್ನು ಬೆಂಬಲಿಸಿದ ಕಾಂಗ್ರೆಸ್ ಸಚಿವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಬಾಂಬ್ ಬ್ಲಾಸ್ಟ್ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ
ಅಪರಾಧ ಮಾಡುವುದು ಮತ್ತು ಅಪರಾಧಿಗಳನ್ನು ಬೆಂಬಲಿಸುವುದು ಗಂಭೀರ ವಿಚಾರ. ಆದ್ದರಿಂದ ಆರೋಪಿಗಳನ್ನು ಬೆಂಬಲಿಸಿದವರ ಮೇಲೆಯೂ ಪೊಲೀಸರು ಮೊಕದ್ದಮೆ ದಾಖಲು ಮಾಡಬೇಕು. ಸರ್ಕಾರ ಅಮಾಯಕ ಕಾರ್ಯಕರ್ತರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು ವಾಪಸ್ ಪಡೆಯಬೇಕು. ಇಲ್ಲ ಅಪರಾಧಿಗಳ ಬೆಂಬಲಕ್ಕೆ ನಿಂತಿದ್ದ ಸರ್ಕಾರದ ಮಂತ್ರಿಗಳ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.