ಮಂಗಳೂರು: ನಗರದ ಅಡ್ಯಾರುಪದವಿನಲ್ಲಿ ಯುವಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅರ್ಕುಳದ ನಿತಿನ್ ಪೂಜಾರಿ(21), ಅಡ್ಯಾರ್ ಕಟ್ಟೆಯ ಪ್ರಾಣೇಶ್ ಪೂಜಾರಿ(20), ಪಡೀಲ್ ಕಂಡೇವಿನ ಕಿಶನ್ ಪೂಜಾರಿ(21) ಬಂಧಿತ ಆರೋಪಿಗಳು.
ಜುಲೈ 7 ರಂದು ಅಡ್ಯಾರುಪದವಿನಲ್ಲಿ ಕೇರಳದ ಮಲಪ್ಪುರಂ ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜೊಂದರ 3ನೆ ವರ್ಷದ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಸಾಜಿದ್ ಹಾಗೂ ಆತನ ಸ್ನೇಹಿತ ನೌಫಲ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು.
ಬೈಕ್ ನಲ್ಲಿ ನೌಫಲ್ ಜೊತೆ ಬರುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಸ್ಕೂಟರ್ ಸ್ಟಾರ್ಟ್ ಆಗುವುದಿಲ್ಲ ಎಂದು ಹೇಳಿ ಬೈಕ್ ನಲ್ಲಿ ಹೋಗುತ್ತಿದ್ದವರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಮೂವರು ಚೂರಿಯಿಂದ ಇರಿಯಲೆತ್ನಿಸಿದ್ದು ನೌಫಲ್ ಈ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದರು. ಆದರೆ ಸಾಜಿದ್ ಗೆ ಚೂರಿಯಿಂದ ಇರಿಯಲಾಗಿತ್ತು. ಪರಿಣಾಮ ಸಾಜಿದ್ ನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.