3-4 ತಿಂಗಳಿನಲ್ಲಿ ಲಸಿಕೆ ಲಭ್ಯ, ನನಗೆ ವಿಶ್ವಾಸವಿದೆ – ಹರ್ಷವರ್ಧನ್

Public TV
2 Min Read
harshavardhan

ನವದೆಹಲಿ: ಇನ್ನು 3-4 ತಿಂಗಳಿನಲ್ಲಿ ಕೊರೊನಾಗೆ ಭಾರತದಲ್ಲಿ ಲಸಿಕೆ ಸಿಗಲಿದೆ. ಲಸಿಕೆ ಲಭ್ಯವಾಗುವ ವಿಚಾರದಲ್ಲಿ ನನಗೆ ಬಹಳ ವಿಶ್ವಾಸವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಕಾರ್ಯಕ್ರಮದ ಒಂದರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಮಾನದಂಡಗಳ ಅಡಿಯಲ್ಲಿ ಲಸಿಕೆ ವಿತರಣೆ ಮಾಡಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಬಳಿಕ ಹಿರಿಯ ನಾಗರಿಕರಿಗೆ ಲಸಿಕೆಯನ್ನು ಹಾಕಲಾಗುವುದು ಎಂದು ತಿಳಿಸಿದರು.

ಜನತಾ ಕರ್ಫ್ಯೂ ಮತ್ತು ಲಾಕ್‌ಡೌನ್‌ ಯಶಸ್ವಿಯಾದ ಕಾರಣ ನಮ್ಮ ದೇಶದಲ್ಲಿ ಕೊರೊನಾ ಈಗ ನಿಯಂತ್ರಣದಲ್ಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಬಹಳ ಕಠಿಣ ನಿರ್ಧಾರ ತೆಗೆದುಕೊಂಡು ಹಂತ ಹಂತವಾಗಿ ಅನ್‌ಲಾಕ್‌ ಮಾಡಿದ್ದು ಸಹಕಾರಿಯಾಗಿದೆ. 2021 ಎಲ್ಲರಿಗೂ ಸಿಹಿ ತರುವ ವರ್ಷವಾಗಲಿದೆ ಎಂದು ಈ ವೇಳೆ ಹರ್ಷವರ್ಧನ್‌ ಆಶಿಸಿದರು.  ಇದನ್ನೂ ಓದಿ: ಕೊರೊನಾದಿಂದ ಮೃತ ವಾರಿಯರ್ಸ್ ಮಕ್ಕಳಿಗೆ MBBS ನಲ್ಲಿ 5 ಸೀಟ್ ಮೀಸಲು

covaxin bharat biotech CORONA COVID 2

ಯಾವ ಹಂತದಲ್ಲಿದೆ?
ಈಗಾಗಲೇ ಲಸಿಕೆ ಪ್ರಯೋಗ ಪೂರ್ಣಗೊಳಿಸಿರುವ ಫೈಜರ್, ಎಲ್ಲಾ ಅಂದುಕೊಂಡಂತೆ ಆದರೆ ಕ್ರಿಸ್‍ಮಸ್‍ಗೆ ಮೊದಲೇ ಲಸಿಕೆಯನ್ನು ಮಾರುಕಟ್ಟೆಗೆ ಬಿಡಲು ಪ್ಲಾನ್ ಮಾಡಿದೆ. ಈಗಾಗಲೇ ತುರ್ತು ಅನುಮತಿ ಕೋರಿ ಅಮೆರಿಕಾದ ಎಫ್‍ಡಿಎ, ಐರೋಪ್ಯ ಒಕ್ಕೂಟಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಡಿಸೆಂಬರ್ 2ನೇ ವಾರ ಅನುಮತಿ ಸಿಗಬಹುದು ಎಂದು ಬಯೋ ಎನ್‍ಟೆಕ್ ಸಂಸ್ಥೆ ಹೇಳಿಕೊಂಡಿದೆ. ಈ ಮಧ್ಯೆ, ಆಸ್ಟ್ರಾಜೆನಿಕಾ ಲಸಿಕೆಯ 2ನೇ ಹಂತದ ಪ್ರಯೋಗ ಯಶಸ್ವಿಯಾಗಿದೆ. ಸುಲಭವಾಗಿ ಸೋಂಕಿಗೆ ತುತ್ತಾಗುವ ವೃದ್ಧರ ಮೇಲೆ ಈ ಲಸಿಕೆ ಉತ್ತಮ ಪರಿಣಾಮ ಬೀರಿದೆ ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.

vaccine hyderabad 2

ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿರುವ ಕೋವ್ಯಾಕ್ಸಿನ್, ಸ್ಪುಟ್ನಿಕ್ ಪೈಕಿ ಯಾವುದಾದರೊಂದು ಲಸಿಕೆ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಭಾರತಕ್ಕೆ ಲಭ್ಯವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಲಸಿಕೆ ವಿತರಣೆ ಮತ್ತು ಸಂಗ್ರಹಕ್ಕೆ ಯುದ್ದೋಪಾದಿಯಲ್ಲಿ ಸಿದ್ಧತೆ ಮಾಡಿಕೊಳ್ತಿದೆ. ಲಸಿಕೆ ಹಂಚಿಕೆಯ ಪ್ರಾಥಮಿಕ ರೂಪುರೇಷೆಗಳನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಬಹಿರಂಗಪಡಿಸಿದ್ದಾರೆ.

ಲಸಿಕೆ ಹಂಚಿಕೆ ಹೇಗೆ?
ಆರಂಭದಲ್ಲಿ ದೇಶದ 25-30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ಸಿದ್ಧತೆ ಮಾಡಿಕೊಂಡಿದೆ. ಜೂನ್ ಹೊತ್ತಿಗೆ 40-50 ಕೋಟಿ ಡೋಸ್ ಸಿದ್ಧವಾಗಲಿದ್ದು ವೈಜ್ಞಾನಿಕ ದತ್ತಾಂಶಗಳ ಆಧಾರದ ಮೇಲೆ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತದೆ.

vaccine hyderabad 1 1

ಕೊರೊನಾ ವಾರಿಯರ್ಸ್, ಆರೋಗ್ಯ ಸಿಬ್ಬಂದಿಗೆ ಮೊದಲ ಆದ್ಯತೆಯ ಬಳಿಕ ವಯೋವೃದ್ಧರು, ರೋಗಪೀಡಿತರಿಗೂ ಲಸಿಕೆ ನೀಡಲಾಗುತ್ತದೆ. ವಯಸ್ಸಿನ ಆಧಾರದ ಮೇಲೆಯೂ ಕೊರೋನಾ ಲಸಿಕೆ ಹಾಕಲಾಗುತ್ತದೆ. ಲಸಿಕೆ ಎಲ್ಲಿದೆ? ಹೇಗೆ ಹಂಚಿಕೆ ಆಗ್ತಿದೆ ಎಂಬುದರ ಬಗ್ಗೆ ಇ-ಟ್ರ್ಯಾಕಿಂಗ್ ಮಾಡಿ ನಿಗಾ ಇಡಲಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *