ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯ (Mantralayam Mutt) ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ಅಂದರೆ ಕಳೆದ 34 ದಿನಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ನಾಣ್ಯ ಹಾಗೂ ನೋಟುಗಳು ಸೇರಿ ಒಟ್ಟು 3 ಕೋಟಿ 30 ಲಕ್ಷದ 20 ಸಾವಿರದ 636 ರೂ. ಕಾಣಿಕೆ ಸಂಗ್ರಹವಾಗಿದೆ.
0.95 ಗ್ರಾಂ ಚಿನ್ನ ಹಾಗೂ 1 ಕೆ.ಜಿ.300 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ಅಕ್ಟೋಬರ್ ನವೆಂಬರ್ ತಿಂಗಳುಗಳ 36 ದಿನಗಳಲ್ಲಿ 3 ಕೋಟಿ 20 ಲಕ್ಷ ರೂ. ಸಂಗ್ರಹವಾಗಿತ್ತು. ಸೆಪ್ಟೆಂಬರ್ ಅಕ್ಟೋಬರ್ ತಿಂಗಳ 20 ದಿನಗಳಲ್ಲಿ 1,98,17,614 ರೂ. ಸಂಗ್ರಹವಾಗಿತ್ತು. ಈ ಬಾರಿ 34 ದಿನಗಳ ಕಾಣಿಕೆ ಎಣಿಕೆ ಇದ್ದಿದ್ದರಿಂದ ಸತತವಾಗಿ 2 ದಿನಗಳ ಕಾಲ ನಾಣ್ಯ ಹಾಗೂ ನೋಟುಗಳ ಎಣಿಕೆ ಕಾರ್ಯ ನಡೆಯಿತು. ಎಣಿಕೆ ಕಾರ್ಯ ಸಂಪೂರ್ಣ ಮುಕ್ತಾಯವಾಗಿರುವ ಕುರಿತು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬರಲಿದೆ ರಿಮೋಟ್ ವೋಟಿಂಗ್ ಮೆಷಿನ್ – ಮತದಾನ ಪ್ರಮಾಣ ಹೆಚ್ಚಿಸಲು ಆಯೋಗ ಮಾಸ್ಟರ್ ಪ್ಲ್ಯಾನ್
ಹುಂಡಿ ಎಣಿಕೆ ವೇಳೆ ಮುಜರಾಯಿ ಇಲಾಖೆ ಅಧಿಕಾರಿಗಳು, ಗುರುಪಾದ ಕರಸೇವಕರು ಹಾಗೂ ನೂರಾರು ಜನ ಸಿಬ್ಬಂದಿ ಹಾಗೂ ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮಂತ್ರಾಲಯ ಗುರುರಾಯರ ಮಠದ (Rayara Mutt) ಕಾಣಿಕೆ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಇದನ್ನೂ ಓದಿ: ನಾಳೆ ಮಂಡ್ಯಗೆ ಅಮಿತ್ ಶಾ- ಹಳೆ ಮೈಸೂರು ಭಾಗದ ಮೇಲೆ ಬಿಜೆಪಿ ಕಣ್ಣು