ದುಬೈ: ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 3 ರನ್ ಹೊಡೆದಿದ್ದರೆ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಐಪಿಎಲ್‌ನಲ್ಲಿ ಕೊಹ್ಲಿ ದಾಖಲೆ ಮುರಿಯುತ್ತಿದ್ದರು.
ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್ ಔಟಾಗದೇ 132 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ ಕೊನೆಯ 2 ಓವರ್‌ಗಳ 9 ಎಸೆತದಲ್ಲಿ 42 ರನ್ ಚಚ್ಚಿದ್ದರು. ಈ ವರ್ಷದ ಐಪಿಎಲ್‌ನಲ್ಲಿ ಇದು ಅತಿ ಹೆಚ್ಚಿನ ರನ್ ಆಗಿದ್ದರೂ ಐಪಿಎಲ್‌ಲ್ಲಿ ಕೊನೆಯ 2 ಓವರ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ದಾಖಲೆ ಈಗಲೂ ಕೊಹ್ಲಿ ಹೆಸರಿನಲ್ಲಿದೆ. ಇದನ್ನೂ ಓದಿ: ಐಪಿಎಲ್ ಒಂದು ಬ್ರ್ಯಾಂಡ್, ಪಾಕಿಸ್ತಾನಿ ಆಟಗಾರರು ಮಿಸ್ ಮಾಡಿಕೊಳ್ಳುತ್ತಿದ್ದಾರೆ: ಅಫ್ರಿದಿ
2016ರಲ್ಲಿ ಕೊಹ್ಲಿ ಗುಜರಾತ್ ಲಯನ್ಸ್ ವಿರುದ್ಧ 10 ಎಸೆತಗಳಲ್ಲಿ 44 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ 63 ಎಸೆತಗಳಲ್ಲಿ ಕೊಹ್ಲಿ ಔಟಾಗದೇ 100 ರನ್ ಹೊಡೆದಿದ್ದರು. ಈ ಪಂದ್ಯದಲ್ಲಿ ಕೊಹ್ಲಿ 11 ಬೌಂಡರಿ 1 ಸಿಕ್ಸರ್ ಬಾರಿಸಿದ್ದರು.
ಮೂರನೇ ಸ್ಥಾನದಲ್ಲಿ ಬ್ರೆಂಡನ್ ಮೆಕಲಂ ಇದ್ದಾರೆ. 2008ರ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 11 ಎಸೆತಗಳಲ್ಲಿ 39 ರನ್ ಚಚ್ಚಿದ್ದರು. ಈ ಪಂದ್ಯದಲ್ಲಿ ಮೆಕಲಂ 73 ಎಸೆತಗಳಲ್ಲಿ 13 ಸಿಕ್ಸರ್, 10 ಬೌಂಡರಿ ಹೊಡೆದು 158 ರನ್ ಹೊಡೆದಿದ್ದರು.
ನಾಲ್ಕನೇಯ ಸ್ಥಾನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದ ಕ್ರಿಸ್ ಮೋರಿಸ್ ಇದ್ದಾರೆ. 9 ಎಸೆತಗಳಲ್ಲಿ 38 ರನ್ ಚಚ್ಚಿದ್ದರು. 2016ರ ಪಂದ್ಯದಲ್ಲಿ ಮೋರಿಸ್ 32 ಎಸೆತಗಳಲ್ಲಿ 82 ರನ್ ಚಚ್ಚಿದ್ದರು. ಈ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ, 8 ಸಿಕ್ಸರ್ ಹೊಡೆದಿದ್ದರು.
ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ 69 ಎಸೆತದಲ್ಲಿ 132 ರನ್ ಬಾರಿಸಿದ್ದರು. ಈ ಸುಂದರ ಇನ್ನಿಂಗ್ಸ್ 14 ಬೌಂಡರಿ, 7 ಸಿಕ್ಸರ್ ಒಳಗೊಂಡಿತ್ತು.
ಎರಡು ದಾಖಲೆ ಬರೆದ ರಾಹುಲ್
ಈ ಪಂದ್ಯದಲ್ಲಿ ರಾಹುಲ್ ವೈಯಕ್ತಿಕವಾಗಿ ಐಪಿಎಲ್‌ನಲ್ಲಿ 2 ದಾಖಲೆ ನಿರ್ಮಿಸಿದ್ದಾರೆ. ನಾಯಕನಾಗಿ ಅತಿ ಹೆಚ್ಚು ರನ್ ಹೊಡೆದಿದ್ದರೆ ಭಾರತದ ಆಟಗಾರರ ಪೈಕಿ ಅತಿ ಹೆಚ್ಚು ರನ್ ಹೊಡೆದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರವಾಗಿದ್ದಾರೆ.
ನಾಯಕನಾಗಿ ವಾರ್ನರ್, ಸೆಹ್ವಾಗ್, ಕೊಹ್ಲಿ ಕ್ರಮವಾಗಿ ಎರಡು, ಮೂರು, ನಾಲ್ಕನೇಯ ಸ್ಥಾನದಲ್ಲಿದ್ದಾರೆ. ವಾರ್ನರ್ 126, ಸೆಹ್ವಾಗ್ 119, ಕೊಹ್ಲಿ 113 ರನ್ ಹೊಡೆದಿದ್ದಾರೆ.
ಭಾರತದ ಪರ ಅತಿ ಹೆಚ್ಚು ರನ್ ಹೊಡೆದ ಆಟಗಾರರ ಪೈಕಿ ರಿಷಭ್ ಪಂತ್, ಮುರಳಿ ವಿಜಯ್, ಸೆಹ್ವಾಗ್ ಅನುಕ್ರಮವಾಗಿ ಎರಡು, ಮೂರು, ನಾಲ್ಕನೇಯ ಸ್ಥಾನ ಹೊಂದಿದ್ದಾರೆ. ರಿಷಭ್ ಪಂತ್ ಔಟಾಗದೇ 128, ಮುರಳಿ ವಿಜಯ್ 127, ಸೆಹ್ವಾಗ್ 122 ರನ್ ಚಚ್ಚಿದ್ದಾರೆ.