– ಶಂಕಿತನ ಮನೆ ಮೇಲೆ ದಾಳಿ, ಹೆಂಚು ಒಡೆದು ಆಕ್ರೊಶ
– ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ ಸಂಬಂಧಿಕರು
ಮೈಸೂರು: ನಾಪತ್ತೆಯಾಗಿದ್ದ ವಿವಾಹಿತೆ ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿ ಸಂಬಂಧಿಕರು ತಮ್ಮ ಆಕ್ರೋಶ ಹೊರಹಾಕಿದ ಘಟನೆ ಮೈಸೂರಿನಲ್ಲಿ ನಡೆದಿದೆ.
ಶ್ವೇತಾ (20) ಮೃತ ದುರ್ದೈವಿ. ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದ ನಿವಾಸಿಯಾಗಿರುವ ಶ್ವೇತಾ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸೋದರ ಮಾವ ಶಶಿ ಕುಮಾರ್ ಜೊತೆ 2 ವರ್ಷಗಳ ಹಿಂದೆ ಶ್ವೇತಾ ಮದುವೆಯಾಗಿದ್ದರು. ಶಶಿಕುಮಾರ್ ಕಾಸರಗೋಡಿನ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿರುವುದರಿಂದ ದಂಪತಿ ಅಲ್ಲಿಯೇ ನೆಲೆಸಿತ್ತು. ಆದರೆ ಒಂದೂವರೆ ತಿಂಗಳ ಹಿಂದೆ ಸ್ವಗ್ರಾಮ ಕೆಂಬಾಲು ಗ್ರಾಮಕ್ಕೆ ಆಗಮಿಸಿದ್ದ ಶ್ವೇತಾ, ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು.
ಇಂದು ಮಾರ್ಬಳ್ಳಿ ಗ್ರಾಮದ ಕೆರೆಯಲ್ಲಿ ಗೋಣಿಚೀಲದಲ್ಲಿ ಶ್ವೇತಾ ಶವ ಪತ್ತೆಯಾಗಿದೆ. ಅದೇ ಗ್ರಾಮದ ಶಿವು ಎಂಬಾತ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಶಿವು ಮನೆ ಮೇಲೆ ದಾಳಿ ನಡೆಸಿರುವ ಶ್ವೇತಾ ಸಂಬಂಧಿಕರು, 2 ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ, ಮನೆಯ ಹೆಂಚುಗಳನ್ನು ಒಡೆದು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ತಲೆಮರೆಸಿಕೊಂಡಿರುವ ಶಿವುಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.