ಬೆಂಗಳೂರು: ವ್ಯಾಕ್ಸಿನ್ ವಿಚಾರದಲ್ಲಿ ಹೈ ಕೋರ್ಟ್ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಅವರಿಗೆ ವ್ಯಾಕ್ಸಿನ್ ಒದಗಿಸುತ್ತಿರೋ ಇಲ್ಲವೋ ಹೇಳಿ ಎಂದು ಪ್ರಶ್ನಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. 2ನೇ ಡೋಸ್ ಲಸಿಕೆ ಪಡೆಯಲು 31 ಲಕ್ಷ ಜನ ಕಾಯುತ್ತಿದ್ದಾರೆ. ಆದರೆ ವ್ಯಾಕ್ಸಿನ್ ಸರಿಯಾಗಿ ಲಭ್ಯವಾಗುತ್ತಿಲ್ಲ. ಈಗ ಸಮಯಕ್ಕೆ ಸರಿಯಾಗಿ ಲಸಿಕೆ ಸಿಗದಿದ್ದರೆ ಮತ್ತೊಂದು ಡೋಸ್ ಬೇರೆ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವೇ? ನಿಮ್ಮಿಂದ ಲಸಿಕೆ ಒದಗಿಸಲು ಆಗದಿದ್ದರೆ ಹೇಳಿ ಆದೇಶದಲ್ಲಿ ಹಾಗೇ ದಾಖಲಿಸುತ್ತೇವೆ ಎಂದು ಕೋರ್ಟ್ ಚಾಟಿ ಬೀಸಿದೆ.
Advertisement
Advertisement
ರಾಜ್ಯದಲ್ಲಿ 6 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ನೀವು ಶೇ.1ರಷ್ಟು ಜನರಿಗೂ ವ್ಯಾಕ್ಸಿನ್ ಒದಗಿಸಿಲ್ಲ. ಇದು ನಿಮ್ಮ ವ್ಯಾಕ್ಸಿನೇಷನ್ ಕಾರ್ಯಕ್ರಮದ ರೀತಿಯೇ? ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ 2 ದಿನಗಳಲ್ಲಿ ವ್ಯಾಕ್ಸಿನೇಷನ್ ಮಾಡುವಂತೆ ಆದೇಶಿಸಬೇಕಾಗುತ್ತದೆ ಎಂದು ಸಿಜೆ ಅಭಯ್ ಎಸ್.ಓಕಾ ಅವರಿದ್ದ ವಿಭಾಗೀಯ ಪೀಠ ಎಚ್ಚರಿಸಿದೆ.
Advertisement
ನಿಮ್ಮ ಬಳಿ ಯಾವುದೇ ಸರಿಯಾದ ಚಿತ್ರಣಗಳು ಇಲ್ಲ. ಸರ್ಕಾರದ ಬಳಿ 12 ಲಕ್ಷ ಡೋಸ್ ಗಳು ಮಾತ್ರ ಇದೆ ಎಂದು ಸರ್ಕಾರಿ ಪರ ವಕೀಲರು ಹೇಳುತ್ತಾರೆ. 12 ಲಕ್ಷ ಡೋಸ್ ಗಳಲ್ಲಿ 31 ಲಕ್ಷ ಜನರಿಗೆ ವ್ಯಾಕ್ಸಿನ್ ಕೊಡಬಹುದಾ? ಕೇಂದ್ರ ಸರ್ಕಾರದ ಜೊತೆ ಸರಿಯಾಗಿ ಮಾತನಾಡಿದ್ದೀರಾ? ಅವರಿಗೆ ಮಾಹಿತಿ ಇದೆಯೇ? ಈಗಿರೋ ಡೋಸ್ ಗಳಲ್ಲಿ ಫ್ರಂಟ್ ಲೈನ್ ವಾರಿಯರ್ಸ್, ಹೆಲ್ತ್ ವಾರಿಯರ್ಸ್ ಗೆ ವ್ಯಾಕ್ಸಿನ್ ಲೆಕ್ಕದಲ್ಲಿ ಇಲ್ಲ, ಅವರಿಗೂ ಸೆಕೆಂಡ್ ಡೋಸ್ ಕೊಡಬೇಕಲ್ಲಾ ಎಂದು ಕೋರ್ಟ್ ಪ್ರಶ್ನಿಸಿದೆ.
Advertisement
ಕೇಂದ್ರ ಸರ್ಕಾರದ ಜೊತೆ ಹೇಗೆ ಮಾತುಕತೆ ಮಾಡಿದ್ದೀರಿ, ಸಂಪರ್ಕದ ಬಗ್ಗೆ ಮಾಹಿತಿ ಕೊಡಿ ಎಂದು ಕೇಳಿದೆ. ಈ ವೇಳೆ ಎಲ್ಲ ರಾಜ್ಯಗಳಿಗೂ ಮಾರ್ಗಸೂಚಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ಹಾಗಾದರೆ ಕರ್ನಾಟಕ ಸರ್ಕಾರ ಎಡವಟ್ಟು ಮಾಡಿದೆ, ಶೇ.70 ವ್ಯಾಕ್ಸಿನೇಷನ್ ಉಳಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ವರೆಗೆ 70:30ರ ಅನುಗುಣದಂತೆ ಲಸಿಕೆ ಡೋಸ್ ಕೊಡಲಾಗುತ್ತಿತ್ತು. ಶೇ.70 ರಷ್ಟು ಸೆಕೆಂಡ್ ಡೋಸ್ ಗೆ ಹಾಗೂ ಶೇ.30 ರಷ್ಟು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ನಿನ್ನೆ ತೀರ್ಮಾನ ಮಾಡಿದ್ದು, ಕೇವಲ ಎರಡನೇ ಡೋಸ್ ಲಸಿಕೆಯನ್ನು ಮಾತ್ರ ನೀಡಲು ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲು ತಿಳಿಸಿದರು.
ಸರ್ಕಾರದ ವಿರುದ್ಧ ಆಕ್ರೋಶ
ವ್ಯಾಕ್ಸಿನ್ ಕೊರತೆ ಇದೆಯೋ, ಇಲ್ಲವೋ ಎಂಬುದನ್ನು ಸರ್ಕಾರ ಹೇಳಬೇಕು. ಜನರ ಮುಂದೆ ಸರ್ಕಾರ, ಸರ್ಕಾರದ ಸಚಿವರು ನಿಜ ಹೇಳಬೇಕು. ವಾಸ್ತವಾಂಶ ಏನಿದೆ ಎನ್ನುವುದನ್ನು ಜನರಿಗೆ ತಿಳಿಸಬೇಕು. ಅದನ್ನು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ. ಎಷ್ಟು ವ್ಯಾಕ್ಸಿನ್ ಇದೆ, ಎಷ್ಟು ಇಲ್ಲ ಅನ್ನುವುದನ್ನು ವೆಬ್ ಸೈಟ್ ಮೂಲಕ ಮಾಹಿತಿ ನೀಡಿ. ಜನರಿಗೆ ಸುಮ್ಮನೆ ಭರವಸೆ ಕೊಡುವುದು ಬೇಡ ಎಂದು ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ.
ಕೇಂದ್ರದಿಂದಲೂ ಮಾಹಿತಿ ಕೇಳಿದ ಕೋರ್ಟ್
1ನೇ ಡೋಸ್ ತೆಗೆದುಕೊಂಡವರಿಗೆ 2ನೇ ಡೋಸ್ ಸಿಗುತ್ತಿಲ್ಲ. 26 ಲಕ್ಷ ಜನರಿಗೆ ವ್ಯಾಕ್ಸಿನ್ ಕೊರತೆಯಿದೆ. ಇದನ್ನು ಹೇಗೆ ಸರಿಪಡಿಸುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಸಿದೆ. ಇದಕ್ಕೆ ಉತ್ತರ ನೀಡಿದ ಕೇಂದ್ರ ಸರ್ಕಾರದ ಎಎಸ್ಜಿ ಐಶ್ವರ್ಯಾ ಭಾಟಿ, ವ್ಯಾಕ್ಸಿನ್ ವಿಳಂಬವಾದರೆ 1ನೇ ಡೋಸ್ ವ್ಯರ್ಥವಾಗಲ್ಲ, ಕೋವ್ಯಾಕ್ಸಿನ್ 2ನೇ ಡೋಸ್ ಗೆ 6 ವಾರ ಕಾಲಾವಕಾಶವಿದೆ. ಕೋವಿಶೀಲ್ಡ್ ಗೆ 8 ವಾರ ಕಾಲಾವಕಾಶವಿದೆ. ಈ ಬಗ್ಗೆ ತಜ್ಞರ ಸಮಿತಿಯೂ ಪರಿಶೀಲನೆ ನಡೆಸುತ್ತಿದೆ. ಕಾಲಮಿತಿ ಹೆಚ್ಚಿಸುವ ಬಗ್ಗೆ 2 ದಿನದಲ್ಲಿ ಅಭಿಪ್ರಾಯ ತಿಳಿಸಲಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಮಾರ್ಗಸೂಚಿ ನೀಡಿತ್ತು. ನೀಡಲಾಗುವ ಲಸಿಕೆಯಲ್ಲಿ ಶೇ.70 ರಷ್ಟನ್ನು 2ನೇ ಡೋಸ್ ಗೆ ಬಳಸುವಂತೆ ತಿಳಿಸಿತ್ತು. ಈ ಮಾರ್ಗಸೂಚಿ ಪಾಲಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ ಎಂದು ಹೈಕೋರ್ಟ್ ಗೆ ಕೇಂದ್ರದ ಎಎಸ್ಜಿ ಐಶ್ವರ್ಯಾ ಭಾಟಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೇಳಬಯಸುತ್ತೀರಾ ಎಂದು ಮತ್ತೆ ಕೇಂದ್ರ ಸರ್ಕಾರದ ಎಎಸ್ಜಿಗೆ ಹೈಕೋರ್ಟ್ ಪ್ರಶ್ನಿಸಿದೆ. ಎಲ್ಲರೂ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಾವು ರಾಜ್ಯ ಸರ್ಕಾರವನ್ನು ದೂರಲು ಬಯಸುವುದಿಲ್ಲ. ನಾಳೆ ವ್ಯಾಕ್ಸಿನೇಷನ್ ಹಂಚಿಕೆ ನಿಗದಿಯಾಗಿದೆ. ಈ ವೇಳೆ ವ್ಯಾಕ್ಸಿನ್ ಕೊರತೆ ಬಗ್ಗೆಯೂ ಗಮನಹರಿಸಲಾಗುವುದು. ಕರ್ನಾಟಕ ವ್ಯಾಕ್ಸಿನೇಷನ್ ವಿಚಾರದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಎಎಸ್ ಜಿ ಐಶ್ವರ್ಯ ಭಾಟಿ ಹೈಕೋರ್ಟ್ ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಿದ್ದಾರೆ.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ವ್ಯಾಕ್ಸಿನೇಷನ್ ಬಗ್ಗೆ ಈ ವರೆಗೆ ಮೂರು ಬಾರಿ ಮಾರ್ಗಸೂಚಿ ನೀಡಿದೆ. ಏಪ್ರಿಲ್ 16ರಂದೇ ಕೇಂದ್ರ ಸರ್ಕಾರ ಪತ್ರ ಬರೆದಿದೆ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ರಾಜ್ಯ ಸರ್ಕಾರ ಮಾರ್ಗಸೂಚಿ ಉಲ್ಲಂಘನೆ ಮಾಡಿದ್ದೇಕೆ? ಕೇಂದ್ರದ ಸಲಹೆ ಪಾಲಿಸಿದ್ದರೆ 2ನೇ ಡೋಸ್ ಲಸಿಕೆಯ ಸಮಸ್ಯೆ ಉಂಟಾಗುತ್ತಿರಲಿಲ್ಲ. ಶೇ.70ರಷ್ಟನ್ನು 2ನೇ ಡೋಸ್ ಗೆ ಏಕೆ ಮೀಸಲಿಡಲಿಲ್ಲ. ಇದು ರಾಜ್ಯ ಸರ್ಕಾರದ ಗಂಭೀರ ಉಲ್ಲಂಘನೆಯಾಗಿದೆ. ಮೂರು ಪತ್ರಗಳನ್ನು ಎಲ್ಲ ರಾಜ್ಯಗಳಿಗೂ ಕಳುಹಿಸಲಾಗಿದೆ ಎಂದು ಲಸಿಕೆ ಒದಗಿಸದ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಟೆಸ್ಟ್ ರಿಪೋರ್ಟ್ ನೀಡಲು ಸಹ ವಿಳಂಬವಾಗುತ್ತಿದೆ. ನಮ್ಮ ಕೋರ್ಟ್ ಸಿಬ್ಬಂದಿಯೊಬ್ಬರು ಸಾವಿಗೀಡಾಗಿದ್ದಾರೆ. ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಟೆಸ್ಟಿಂಗ್ ಕೊಟ್ಟಿದ್ದರು, ಅವರ ಟೆಸ್ಟ್ ರಿಪೋರ್ಟ್ ಬರೋದು ತಡವಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವುದು ತಡವಾಗಿದೆ. ಸಾವಿಗೀಡಾಗಿರೋದು ಆಘಾತ ಉಂಟು ಮಾಡಿದೆ. 24 ಗಂಟೆಯಲ್ಲಿ ಟೆಸ್ಟ್ ರಿಪೋರ್ಟ್ ಕೊಡಲು ಸೂಚನೆ ನೀಡಲಾಗಿದೆ. ಆದರೂ ರಿಪೋರ್ಟ್ ಸರಿಯಾಗಿ ಬರುತ್ತಿಲ್ಲ ಎಂದು ಕೋರ್ಟ್ ತರಾಟೆ ತೆಗೆದುಕೊಂಡಿದೆ.