ಲಂಡನ್: ಒಂದು ಕಡೆ ಮಳೆಯ ಕಾಟ ಮತ್ತೊಂದೆಡೆ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ ಸನ್ ಬೌಲಿಂಗ್ ಆರ್ಭಟಕ್ಕೆ ನಲುಗಿದ ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಇನ್ನಿಂಗ್ಸ್ ಹಾಗೂ 159 ರನ್ ಗಳಿಂದ ಇಂಗ್ಲೆಂಡ್ ಜಯಗಳಿಸಿದ್ದು 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿ ನಾಲ್ಕನೇಯ ದಿನದಾಟ ಮುಂದುವರಿಸಿದ ಇಂಗ್ಲೆಂಡ್ 88.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 47 ಓವರ್ ಗಳಲ್ಲಿ 130 ರನ್‍ಗಳಿಗೆ ಆಲೌಟ್ ಆಯ್ತು.
ಮೂರನೇ ಓವರ್ ನಲ್ಲಿ ತಂಡದ ಖಾತೆ ತೆರೆಯುವ ಮೊದಲೇ ಆರಂಭಿಕ ಆಟಗಾರ ಮುರಳಿ ವಿಜಯ್ ಔಟಾದರು. ಬ್ಯಾಟ್ಸ್ ಮನ್ ಗಳ ಪೈಕಿ ಯಾರು ಕ್ರೀಸ್ ನಲ್ಲಿ ಗಟ್ಟಿ ನಿಂತು ಆಡದ ಕಾರಣ 61 ರನ್ ಗಳಿಸುವಷ್ಟರಲ್ಲೇ ಆಗ್ರ 6 ಮಂದಿ ಆಟಗಾರರು ಪೆವಿಲಿಯನ್ ಸೇರಿ ಆಗಿತ್ತು.
ರಾಹುಲ್ 10, ಚೇತೇಶ್ವರ ಪೂಜಾರ 17, ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ 17, ದಿನೇಶ್ ಕಾರ್ತಿಕ್ 0 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಮತ್ತು ಆರ್. ಅಶ್ವಿನ್ 7ನೇ ವಿಕೆಟ್ ಗೆ 55 ರನ್ ಜೊತೆಯಾಟವಾಡಿದ ಪರಿಣಾಮ ಭಾರತದ ಸ್ಕೋರ್ ನೂರರ ಗಡಿ ದಾಟಿತು. ಪಾಂಡ್ಯ 26 ರನ್ ಗಳಿಸಿ ಔಟಾದರೆ ಆರ್ ಅಶ್ವಿನ್ ಔಟಾಗದೇ 33 ರನ್(48 ಎಸೆತ, 5 ಬೌಂಡರಿ) ಗಳಿಸಿದರು.
ಜೇಮ್ಸ್ ಆಂಡರ್ ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ 4 ವಿಕೆಟ್ ಪಡೆದರೆ ಆಲ್ ರೌಂಡರ್ ಪ್ರದರ್ಶನ ನೀಡಿದ ಕ್ರೀಸ್ ವೋಕ್ಸ್ 2 ವಿಕೆಟ್ ಪಡೆದರು. ಆಗಾಗ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಲಾಗುತಿತ್ತು.
ಇಂಗ್ಲೆಂಡ್ ಬೃಹತ್ ಮೊತ್ತ:
ಭಾರತದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದರೆ ಇಂಗ್ಲೆಂಡ್ ಬ್ಯಾಟ್ಸ ಮನ್ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪರಿಣಾಮ 396 ರನ್ ಗಳಿಸಿತ್ತು. ಕ್ರಿಸ್ ವೋಕ್ಸ್ ಔಟಾಗದೇ 137 ರನ್(177 ಎಸೆತ, 21 ಬೌಂಡರಿ) ಜಾನಿ ಬೇರ್ ಸ್ಟೋವ್ 93 ರನ್(144 ಎಸೆತ, 12 ಬೌಂಡರಿ) ಹೊಡೆದರು. ಸ್ಯಾಮ್ ಕರ್ರನ್ 40 ರನ್(49 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದ ಕೂಡಲೇ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು.
ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 31 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಟೆಸ್ಟ್ ನಾಟಿಂಗ್‍ಹ್ಯಾಮ್ ನಲ್ಲಿ ಇದೇ 18 ರಿಂದ ಆರಂಭವಾಗಲಿದೆ.
ಸಂಕ್ಷೀಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ 107/10 – 35.2 ಓವರ್
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 396/7 ಡಿಕ್ಲೇರ್ – 88.1 ಓವರ್
ಭಾರತ ಎರಡನೇ ಇನ್ನಿಂಗ್ಸ್ 130/10 – 47 ಓವರ್